ಬಂಡೀಪುರದಲ್ಲಿ ರಾತ್ರಿ ಸಫಾರಿ ಆರೋಪ: ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ನಟ ಧನ್ವೀರ್

ಗುಂಡ್ಲುಪೇಟೆ, ಅ.23: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವೇಳೆ ಹುಲಿ ನೋಡಿದ್ದಾಗಿ ಬಜಾರ್ ಸಿನೆಮಾ ನಟ ಧನ್ವೀರ್ ಸಾಮಾಜಿಕ ಜಾಲತಾಣಲ್ಲಿ ಪೋಸ್ಟ್ ಹಾಕಿದ್ದಾರೆ. ರಾತ್ರಿ ಸಫಾರಿ ಮಾಡಿರುವ ವೀಡಿಯೊ ಇದೀಗ ವೈರಲ್ ಆಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ತಮ್ಮ ಸಫಾರಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಧನ್ವೀರ್ ಗೆ ಬಂಡೀಪುರದಲ್ಲಿ ರಾತ್ರಿ ಸಫಾರಿ ನಡೆಸಿರುವುದು ಕಾನೂನುಬಾಹಿರ ಎಂದು ಹಲವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸಿನೆಮಾ ನಟನಿಗೆ ಬಂಡೀಪುರದಲ್ಲಿ ರಾತ್ರಿ ಸಫಾರಿ ನಡೆಸಲು ಅನುಮತಿ ನೀಡಲಾಗಿದ್ದು, ಜನಸಾಮಾನ್ಯರಿಗೊಂದು ನ್ಯಾಯ, ಸೆಲೆಬ್ರಿಟಿಗಳಿಗೊಂದು ನ್ಯಾಯಾನಾ ಎಂಬ ಮಾತು ಕೇಳಿಬಂದಿದೆ.
ನಾನು 4:30ರಿಂದ 6:30ರ ಸಫಾರಿ ಹೋಗಿದ್ದೆ. 6:31ಕ್ಕೆ ಒಂದು ಹುಲಿ ನಮ್ಮ ವಾಹನದ ಮುಂದೆ ನಡೆದುಕೊಂಡು ಹೋಯ್ತು. ಆ ವೀಡಿಯೋವನ್ನು ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೆ. ನಾನು ರಾತ್ರಿ ಸಫಾರಿ ಮಾಡಿಲ್ಲ. ಜೊತೆಗೆ ಅರಣ್ಯ ಇಲಾಖೆಯ ವಾಹನದಲ್ಲೇ ನಾವು ಹೋಗಿದ್ದು, ಅದು 6:30ರ ವರೆಗೆ ಮಾತ್ರ ಲಭ್ಯವಿರೋದು. ಸರಕಾರ ಕೊಟ್ಟಿರುವ ಸಮಯದಲ್ಲೇ ಸಫಾರಿ ಮುಗಿಸಿ ವಾಪಾಸಾಗಿದ್ದೆ. ಅರಣ್ಯ ಇಲಾಖೆಯ ಸಿಬ್ಬಂದಿ ಕೂಡಾ ರಾತ್ರಿ ಸಫಾರಿಗೆ ಅವಕಾಶ ನೀಡುವುದಿಲ್ಲ’ ಎಂದು ನಟ ಧನ್ವೀರ್ ಸ್ಪಷ್ಟನೆ ನೀಡಿದ್ದಾರೆ.
ಪ್ರಾಣಿಗಳಿಗೆ ತೊಂದರೆಯಾಗಬಾರದು ಎಂದು ಸಫಾರಿಗೆ ಸಮಯ ನಿಗದಿ ಮಾಡಲಾಗಿದೆ. ಆದರೆ, ಸೆಲೆಬ್ರಿಟಿಗಳಿಗಾಗಿ ಇಷ್ಟ ಬಂದಂತೆ ರಾತ್ರಿ ವೇಳೆ ಸಫಾರಿ ನಡೆಸುತ್ತಿದ್ದಾರೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ಸಿಟ್ಟು ಹೊರಹಾಕಿದ್ದಾರೆ. ಇನ್ನು ನಟನ ಬಗ್ಗೆ ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಧನ್ವೀರ್ ತಮ್ಮ ರಾತ್ರಿ ಸಫಾರಿ ವೀಡಿಯೊವನ್ನು ಡಿಲೀಟ್ ಮಾಡಿದ್ದಾರೆ.
ನಟ ಧನ್ವೀರ್ ಬಂಡೀಪುರದಲ್ಲಿ ನೈಟ್ ಸಫಾರಿ ಮಾಡಿದ್ದರೆನ್ನಲಾದ ವೀಡಿಯೊ ವೈರಲ್ ಆಗಿದೆ. ಈ ಬಗ್ಗೆ ಪರಿಶೀಲಿಸಿ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುವಂತೆ ವಲಯ ಅರಣ್ಯಾಧಿಕಾರಿಗೆ ಸೂಚನೆ ನೀಡಿದ್ದೇನೆ.
-ಟಿ.ಬಾಲಚಂದ್ರ, ಬಂಡೀಪುರ ಹುಲಿಯೋಜನೆ ನಿರ್ದೇಶಕ
ಈ ವಿಷಯ ಈಗ ನನ್ನ ಗಮನಕ್ಕೆ ಬಂದಿದೆ. ನಾವು ಯಾವುದೇ ರೀತಿಯಲ್ಲಿ ಅವಕಾಶ ಕೊಟ್ಟಿಲ್ಲ. ಒಂದು ವೇಳೆ ಆನೆ ಬಳಸಿಕೊಂಡಿದ್ದರೆ ಈ ಬಗ್ಗೆ ತನಿಖೆಗೆ ಆದೇಶ ಮಾಡುತ್ತೇನೆ. ತಪ್ಪು ಕಂಡು ಬಂದರೆ ಕಾನೂನು ಕ್ರಮಕೈಗೊಳ್ಳಲಾಗುವುದು.
-ಮಹೇಶ, ಉಪ ಅರಣ್ಯ ಸಂಕ್ಷಣಾಧಿಕಾರಿಗಳು ನಾಗರಹೊಳೆ







