5 ವರ್ಷ ಕಳೆದರೂ ಸಿಗದ ಬಾಕಿ ವೇತನ: ಪಿಎಸ್‍ಎಸ್‍ಕೆ ನಿವೃತ್ತ ನೌಕರರ ಪ್ರತಿಭಟನೆ

ಪಾಂಡವಪುರ, ಅ.23: ಕಳೆದ 5 ವರ್ಷದಿಂದ ಈವರೆಗೂ ಕಾರ್ಖಾನೆಯಲ್ಲಿ ನಿವೃತ್ತರಾಗಿರುವ 41 ಜನ ಕಾರ್ಮಿಕರು ಸೇರಿದಂತೆ ಹಾಲಿ ಕೆಲಸದಲ್ಲಿರುವ ನೌಕರರಿಗೆ ನೀಡಬೇಕಾದ 9.50 ಕೋಟಿ ರೂ. ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಪಿಎಸ್‍ಎಸ್‍ಕೆ ನಿವೃತ್ತ ನೌಕರರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು.
ನಿವೃತ್ತಿ ನಂತರ ಬರುವ ಭವಿಷ್ಯ ನಿಧಿ, ಬಾಕಿ ವೇತನ, ಗ್ರಾಜುಯಿಟಿ ಮುಂತಾದ ಯಾವುದೇ ಹಣ ನೀಡಿಲ್ಲ. ನಿವೃತ್ತರಾದ ಕಾರ್ಮಿಕರಿಗೆ ಕೆಲಸವೂ ಇಲ್ಲ, ಪಿಂಚಣಿಯೂ ಇಲ್ಲ, ಬರಬೇಕಾದ ಬಾಕಿ ಸಂಬಳವೂ ಬಂದಿಲ್ಲ. ನಮ್ಮ ಜೀವನ ಸಾಗಿಸುವುದಾದರೂ ಹೇಗೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೆಲಸ ಮಾಡುವ ಸಂದರ್ಭದಲ್ಲಿಯೂ ನಮಗೆ 36 ತಿಂಗಳ ವೇತನ ನೀಡಿಲ್ಲ. ಕಾರ್ಖಾನೆ ಆರಂಭವಾಗುತ್ತಿದ್ದಂತೆ ನೌಕರರ ಬಾಕಿ ವೇತನ ನೀಡುವುದಾಗಿ ಗುತ್ತಿಗೆದಾರ ಮುರುಗೇಶ್ ಆರ್. ನಿರಾಣಿ ಅವರು ನೀಡಿದ್ದ ಭರವಸೆ ಸುಳ್ಳಾಗಿದೆ ಎಂದು ಅವರು ಕಿಡಿಕಾರಿದರು.
ಈ ಹಿಂದೆ ಕಾರ್ಖಾನೆ ಆಡಳಿತ ಮಂಡಳಿ ಭವಿಷ್ಯ ನಿಧಿಗೆ ಪಾವತಿಸಬೇಕಾದ ಕಾರ್ಮಿಕರ ಪಾಲು 2 ಕೋಟಿ ರೂ. ಹಣವನ್ನೂ ಪಾವತಿಸದ ಕಾರಣ ನಮಗೆ ಪಿಂಚಣಿಯೂ ಬರುತ್ತಿಲ್ಲ. ಕಾರ್ಖಾನೆ ಆರಂಭಕ್ಕೂ ನಿರಾಣಿ ಅವರು ರಿಜಿಸ್ಟ್ರೇಷನ್ ಸಂದರ್ಭದಲ್ಲಿ ಸರಕಾರಕ್ಕೆ 20 ಕೋಟಿ ರೂ. ಹಣ ಪಾವತಿಸುವುದಾಗಿ ಹೇಳಿದ್ದರು, ಅದನ್ನು ಕೂಡ ಅವರು ಪಾವತಿಸಿಲ್ಲ. ನೌಕರರಿಗೆ ಒಟ್ಟಾರೆ 9.50 ಕೋಟಿ ರೂ. ಹಣ ಪಾವತಿಯಾಗಬೇಕಿದ್ದು, ಈವರೆಗೂ ಯಾವುದೇ ಹಣ ನೀಡಿಲ್ಲ ಎಂದು ಅವರು ಹೇಳಿದರು.
ಇದರಿಂದ ನಮ್ಮ ಕುಟುಂಬದ ಖರ್ಚು, ಆರೋಗ್ಯದ ವೆಚ್ಚ, ಮಕ್ಕಳ ವಿದ್ಯಾಭ್ಯಾಸ ಇತರೆ ನಿರ್ವಹಣೆಗಳು ಕಷ್ಟವಾಗುತ್ತಿದೆ. ಈ ಕೂಡಲೇ ನಮ್ಮ ಬಾಕಿ ವೇತನ ಮಂಜೂರು ಮಾಡಬೇಕು ಇಲ್ಲದಿದ್ದಲ್ಲಿ ಕಾರ್ಖಾನೆ ಎದುರು ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ನಿವೃತ್ತ ನೌಕರರು ಕಾರ್ಖಾನೆ ಲೆಕ್ಕಾಧಿಕಾರಿ ಹೇಮಾ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರಾಮಕೃಷ್ಣ, ನಾಗರಾಜು, ನಾಗಮುದ್ದೇಗೌಡ, ಬಲರಾಮು, ಜಯರಾಮು, ನರಸೇಗೌಡ, ಜೆ.ಸ್ವಾಮಿ, ಕೆ.ನಿಂಗೇಗೌಡ, ಬೆಟ್ಟಸ್ವಾಮೀಗೌಡ, ಎನ್.ಸಿ.ಕೃಷ್ಣೇಗೌಡ, ನಂಜುಂಡ ಆರಾಧ್ಯ, ಡಿ.ಎಸ್.ಮಾದೇಗೌಡ ಇತರರು ಭಾಗವಹಿಸಿದ್ದರು.







