ಗಂಗೊಳ್ಳಿ: ಮನೆಗೆ ಸೋಡಾ ಬಾಟಲಿ ಎಸೆತ, ಕಿಟಕಿ ಗಾಜಿಗೆ ಹಾನಿ ಪ್ರಕರಣ
ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳ ಬಂಧನ
ಗಂಗೊಳ್ಳಿ, ಅ.26: ಇಲ್ಲಿನ ಜಾಮೀಯ ಮಸೀದಿ ಸಮೀಪದ ಮನೆ ಯೊಂದಕ್ಕೆ ಅ.25ರಂದು ರಾತ್ರಿ 11ಗಂಟೆ ಸುಮಾರಿಗೆ ಕಿಡಿಗೇಡಿಗಳು ಸೋಡಾ ಬಾಟಲಿ ಎಸೆದು ಕಿಟಕಿ ಗಾಜುಗಳನ್ನು ಪುಡಿಗೈದಿರುವ ಬಗ್ಗೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಗಂಗೊಳ್ಳಿ ದಾಕುಹಿತ್ಲುವಿನ ಧನುಷ್(22), ಕಿರಣ್(23) ಹಾಗೂ ನಿಖಿಲ್ (23) ಬಂಧಿತ ಆರೋಪಿಗಳು. ಇವರು ರಾತ್ರಿ ಬೈಕಿನಲ್ಲಿ ಬಂದು ಇಫ್ತಿಕಾರ್ ಅಹ್ಮದ್ ಎಂಬವರ ಮನೆಗೆ ಸೋಡಾ ಬಾಟಲಿ ಎಸೆದಿದ್ದು, ಇದರಿಂದ ಕಿಟಕಿ ಗಾಜುಗಳು ಪುಡಿಯಾಗಿವೆ. ಮನೆಯಿಂದ ಹೊರಗಡೆ ಬಂದ ಇಫ್ತಿಕಾರ್ ಆರೋಪಿಗಳನ್ನು ಗುರುತಿಸಿದ್ದು, ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅದರಂತೆ ಪ್ರಕರಣ ದಾಖಲಿಸಿಕೊಂಡು ತಕ್ಷಣ ಕಾರ್ಯಾಚರಣೆ ನಡೆಸಿದ ಗಂಗೊಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಿಡಿಗೇಡಿಗಳು ಈ ಪ್ರದೇಶದಲ್ಲಿ ಗಲಭೆ ನಡೆಸಲು ಈ ಕೃತ್ಯ ಎಸಗಿದ್ದರೆಂದು ತಿಳಿದುಬಂದಿದೆ. ಸ್ಥಳಕ್ಕೆ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಗಂಗೊಳ್ಳಿ ಎಸ್ಸೈ ಭೀಮಾಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೂಕ್ಷ್ಮ ಪ್ರದೇಶ ವಾಗಿರುವ ಗಂಗೊಳ್ಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
‘ವಿನಾಕಾರಣ ತಿರುಗಾಡಿದರೆ ನಿರ್ದಾಕ್ಷಿಣ್ಯ ಕ್ರಮ’
ಗಂಗೊಳ್ಳಿಯಲ್ಲಿ ನಿನ್ನೆ ರಾತ್ರಿ ಮನೆಯೊಂದಕ್ಕೆ ಬಾಟಲಿ ಎಸೆದು ಕಿಟಕಿ ಗಾಜು ಪುಡಿಗೈದ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಠಾಣೆಯಲ್ಲಿ ಶಾಂತಿ ಸಭೆಯನ್ನು ನಡೆಸಲಾಯಿತು.
‘ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಇಂದಿನಿಂದ ರಾತ್ರಿ 10 ಗಂಟೆಯ ನಂತರ ವಿನಾಕಾರಣ ತಿರುಗಾಡು ವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಶಾಂತಿ ಸುವ್ಯವಸ್ಥೆ ಕಾಪಾಡಲು ಇಲಾಖೆ ಯೊಂದಿಗೆ ಸಹಕರಿಸ ಬೇಕೆಂದು ಎಂದು ಗಂಗೊಳ್ಳಿ ಠಾಣಾಧಿಕಾರಿ ಭೀಮಾಶಂಕರ್ ಮನವಿ ಮಾಡಿದ್ದಾರೆ.