ಗಾಯಕಿ ಅನಿತಾ ಡಿಸೋಜರಿಗೆ 16ನೇ ಕಲಾಕಾರ್ ಪುರಸ್ಕಾರ

ಮಂಗಳೂರು, ಅ.27: ಗಾಯನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕಾರ್ವಾಲ್ ಕುಟುಂಬ ಮತ್ತು ಮಾಂಡ್ ಸೊಭಾಣ್ ನೀಡುವ 16ನೇ ಕಲಾಕಾರ್ ಪುರಸ್ಕಾರವು ಕೊಂಕಣಿ ಗಾಯಕಿ ಅನಿತಾ ಡಿಸೋಜರಿಗೆ ಲಭಿಸಿದೆ.
ಅನಿತಾ ಡಿಸೋಜಾ ಕೊಂಕಣಿ, ಕನ್ನಡ, ತುಳು, ಮಲಯಾಳಂ, ಇಂಗ್ಲೀಷ್, ಹಿಂದಿ, ಗುಜರಾತಿ, ತೆಲುಗು, ತಮಿಳು, ಮರಾಠಿ, ಅರಾಬಿಕ್ ಮತ್ತು ಬ್ಯಾರಿ ಹೀಗೆ ಹನ್ನೆರಡು ಭಾಷೆಗಳಲ್ಲಿ ಹಾಗೂ ನವಾಯತಿ ಭಾಷೆಗಳಲ್ಲಿ ಹಾಡಿದ್ದಾರೆ. ವಿವಿಧ ಧ್ವನಿಸುರುಳಿಗಳಲ್ಲಿ 500ಕ್ಕೂ ಮಿಕ್ಕಿ ಹಾಡುಗಳನ್ನು, ಭಾರತ ಮತ್ತು ಗಲ್ಫ್ ದೇಶಗಳ 3000ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಕಂಠಸಿರಿಯನ್ನು ನೀಡಿದ್ದಾರೆ. ಯಾದ್ ಮತ್ತು ಕಲರ್ಸ್ ಧ್ವನಿಸುರುಳಿಗಳನ್ನು ಹೊರ ತಂದಿದ್ದಾರೆ.
ಅವರ ಪ್ರತಿಭೆಗೆ ಕೇರಳ ಸರಕಾರದಿಂದ ಕಲಾತಿಲಕ, ಕರ್ನಾಟಕ ಬ್ಯಾರಿ ಅಕಾಡಮಿಯಿಂದ ತುಳುನಾಡ ಗಾನ ಕೋಗಿಲೆ (2006), ಕನ್ನಡ ಸಾಹಿತ್ಯ ಅಕಾಡಮಿಯಿಂದ ವಿಶ್ವ ಗಡಿನಾಡ ರಾಣಿ ಕೋಗಿಲೆ (2011), ಮಾಂಡ್ ಸೊಭಾಣ್ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ - ಶ್ರೇಷ್ಠ ಗಾಯಕಿ (2014) ಇತ್ಯಾದಿ ಗೌರವಗಳು ಲಭಿಸಿವೆ.
ಮಂಗಳೂರಿನ ಕುಳೂರು ಮೂಲದ ಅನಿತಾ ಡಿಸೋಜ ಬೇಳ ಸದ್ಯ ಅಬುಧಾಬಿಯಲ್ಲಿ ವಾಸ್ತವ್ಯವಿದ್ದು ಕೊಂಕಣಿ ಗಾಯನ ಕ್ಷೇತ್ರವನ್ನು ಶ್ರೀಮಂತಗೊಳಿಸಲು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಕೋವಿಡ್ ನಿಯಂತ್ರಣ ಕಾರಣಗಳಿಂದಾಗಿ ಈ ಕಾರ್ಯವು ಅಬುಧಾಬಿಯಲ್ಲಿ ನಡೆಯಲಿದ್ದು, ಅನಿವಾಸಿ ಉದ್ಯಮಿ ಲಿಯೊ ರಾಡ್ರಿಗಸ್ ಪುರಸ್ಕಾರ ಹಸ್ತಾಂತರ ಮಾಡಲಿದ್ದಾರೆ. ಕೊಂಕಣಿಯ ನೃತ್ಯ, ನಾಟಕ, ಸಂಗೀತ-ಗಾಯನ, ಜನಪದ ಈ ಪ್ರಕಾರಗಳಲ್ಲಿ ಮಹತ್ವದ ಸಾಧನೆ ಮಾಡಿದ ಕರ್ನಾಟಕ ಮೂಲದ ಕಲಾವಿದರನ್ನು ಗೌರವಿಸಲು ಕೊಂಕಣಿ ವಿದ್ವಾಂಸ ವಂ. ಡಾ.ಪ್ರತಾಪ್ ನಾಯ್ಕಾ ತನ್ನ ಕಾರ್ವಾಲ್ ಕುಟುಂಬಸ್ಥರ ಪರವಾಗಿ 2005ರಲ್ಲಿ ಕಲಾಕಾರ್ ಪುರಸ್ಕಾರ ಸ್ಥಾಪಿಸಿದ್ದರು.







