ಅನ್ ಲಾಕ್ 5.0 ಮಾರ್ಗಸೂಚಿಗಳನ್ನು ವಿಸ್ತರಿಸಿದ ಸರಕಾರ

ಹೊಸದಿಲ್ಲಿ, ಅ.27: ಸೆಪ್ಟಂಬರ್‌ನಲ್ಲಿ ನೀಡಲಾದ ಕೋವಿಡ್ 19 ಅನ್‌ಲಾಕ್ ಮಾರ್ಗಸೂಚಿ ನವೆಂಬರ್ 30ರವರೆಗೆ ಜಾರಿಯಲ್ಲಿರುತ್ತದೆ. ಅನ್‌ಲಾಕ್ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಕೇಂದ್ರ ಗೃಹ ಇಲಾಖೆಯ ಪ್ರಕಟಣೆ ತಿಳಿಸಿದೆ. ಸಿನೆಮಾ ಮಂದಿರ, ಮಲ್ಟಿಪ್ಲೆಕ್ಸ್‌ಗಳಲ್ಲಿ 50ಶೇ. ಪ್ರೇಕ್ಷಕರಿಗೆ ಅವಕಾಶ ನೀಡಬಹುದು . ಅಕ್ಟೋಬರ್ 15ರ ಬಳಿಕ ಶಾಲೆ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಸಂಬಂಧಿತ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ನಿರ್ಧಾರ ಕೈಗೊಳ್ಳಬೇಕು. ಕೇಂದ್ರವು ಅನುಮತಿಸಿದ ಪ್ರಯಾಣಗಳನ್ನು ಹೊರತುಪಡಿಸಿ, ಅಂತರ್ ರಾಷ್ಟ್ರೀಯ ಪ್ರಯಾಣ ಸ್ಥಗಿತಗೊಳ್ಳುತ್ತದೆ ಎಂದು ಸೆಪ್ಟಂಬರ್‌ನಲ್ಲಿ ಜಾರಿಗೊಳಿಸಿದ್ದ ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು. ಕಂಟೈನ್‌ಮೆಂಟ್ ವಲಯದಲ್ಲಿ ಜಾರಿಗೊಳಿಸಿರುವ ಲಾಕ್‌ಡೌನ್ ನವೆಂಬರ್ 30ರವರೆಗೆ ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತದೆ ಎಂದು ಗೃಹ ಇಲಾಖೆ ತಿಳಿಸಿದೆ.
ಈ ಮಧ್ಯೆ, ದೇಶದಲ್ಲಿ ಕೊರೋನ ಸೋಂಕಿನಿಂದ ಮರಣಹೊಂದುವ ಪ್ರಮಾಣ 1.50 ಶೇ.ಕ್ಕೆ ಇಳಿದಿದೆ. ದೇಶದಲ್ಲಿ ಅತ್ಯಂತ ಕಡಿಮೆ ಮರಣ ಪ್ರಮಾಣ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ರಾಜಸ್ಥಾನ, ಜಾರ್ಖಂಡ್, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ಒಡಿಶಾ, ಅಸ್ಸಾಂ, ಕೇರಳ ಸಹಿತ 14 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನ ಸೋಂಕಿನ ಮರಣ ಪ್ರಮಾಣ 1 ಶೇ.ಕ್ಕೂ ಕಡಿಮೆಯಿದೆ ಎಂದು ಇಲಾಖೆ ತಿಳಿಸಿದೆ.





