ಕಿಡಿಗೇಡಿಗಳಿಂದ ‘ಮಾರ್ವಾಡಿ ಹಠಾವೊ ಅಭಿಯಾನ’: ಉಡುಪಿ ‘ಮಾರ್ವಾಡಿ ವರ್ತಕರಿಂದ ತೀವ್ರ ಪ್ರತಿರೋಧ

ಉಡುಪಿ, ಅ.27: ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಕೆಲದಿನಗಳಿಂದ ನಡೆಸುತ್ತಿರುವ ‘ಮಾರ್ವಾಡಿ ಹಠಾವೊ ಅಭಿಯಾನ’, ‘ಮಾರ್ವಾಡಿಗಳೇ ಉಡುಪಿ ಬಿಟ್ಟು ತೊಲಗಿ’ ಇದೀಗ ವೈರಲ್ ಆಗುತ್ತಿರುವಂತೆ ಇದಕ್ಕೆ ತೀವ್ರ ಪ್ರತಿರೋಧವೂ ಪ್ರಾರಂಭಗೊಂಡಿದೆ. ಇದರ ವಿರುದ್ಧ ಮಾರ್ವಾಡಿ ವರ್ತಕರೂ ಗರಂ ಆಗಿದ್ದಾರೆ.
ಉಡುಪಿಯ ಕೆಲವು ಕಿಡಿಗೇಡಿಗಳು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ‘ಮಾರ್ವಾಡಿ ಹಠಾವೋ’ ಪೋಸ್ಟ್ ಹಾಕಿ ನಗರದ ಮಾರ್ವಾಡಿಗಳ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದರು. ಇದರಿಂದ ಆಕ್ರೋಶ ಗೊಂಡಿರುವ ಇತರರು ಇದಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕವೇ ಉತ್ತರ ನೀಡುತಿದ್ದು, ‘ಮಾರ್ವಾಡಿಗಳನ್ನು ಉಡುಪಿಯಿಂದ ಓಡಿಸಬೇಕಂತೆ, ಉಡುಪಿ ಏನು ಇವರಪ್ಪನ ಆಸ್ತಿನಾ?’ ಎಂದು ಪ್ರಶ್ನಿಸುತಿದ್ದು, ಇದು ಸಹ ಈಗ ವೈರಲ್ ಆಗುತ್ತಿದೆ.
ಈ ನಡುವೆ ಕಳೆದ ಹಲವು ದಶಕಗಳಿಂದ ಉಡುಪಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಾ ಈಗ ಉಡುಪಿಗರೇ ಆಗಿರುವ ಮೂಲತ ಉತ್ತರ ಭಾರತದವರಾದ ಮಾರ್ವಾಡಿಗಳು. ಈ ಅಭಿಯಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾರ್ವಾಡಿ ವರ್ತಕ ನಾರಾಯಣ ಸಿಂಗ್, ನಾವು ಎರಡು ಮೂರು ದಶಕಗಳಿಂದ ಉಡುಪಿಯಲ್ಲಿ ವ್ಯಾಪಾರ-ವಹಿವಾಟು ಮಾಡುತ್ತಿದ್ದೇವೆ. ನ್ಯಾಯಯುತವಾಗಿ ಎಲ್ಲ ನಿಯಮ ಗಳನ್ನು ಅನುಸರಿಸುತ್ತಾ ಸರಕಾರಕ್ಕೆ ತೆರಿಗೆ ಕಟ್ಟುತ್ತಾ ಬಂದಿದ್ದೇವೆ. ಇದನ್ನು ಸಹಿಸದ ಯಾರೋ ಕೆಲವರು ಈ ರೀತಿ ಅಪಪ್ರಚಾರ ನಡೆಸುತಿದ್ದಾರೆ ಎಂದರು.
‘ಯಾವುದೋ ಒಂದು ಅಂಗಡಿಯಲ್ಲಿ ಏನೋ ಸಣ್ಣಪುಟ್ಟ ಸಮಸ್ಯೆ ಆಗಿರಬಹುದು. ಹಾಗೆಂದು ಎಲ್ಲಾ ಮಾರ್ವಾಡಿಗಳು ಕೂಡಾ ಮೋಸಗಾರರು ಎಂದರ್ಥವಲ್ಲ. ಒಬ್ಬರು ಮಾಡಿದ ತಪ್ಪನ್ನು ಎಲ್ಲರ ಮೇಲೆ ಹೊರಿಸಿ ನೀವು ಮಾರ್ವಾಡಿಗಳ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ ಎಂದು ಅಭಿಯಾನ ಹಮ್ಮಿಕೊಳ್ಳುವುದು ತಪ್ಪು.’ ಎಂದವರು ಹೇಳಿದರು.
ನಾವು ಕೂಡಾ ಭಾರತೀಯರೇ. ನಾವೇನೂ ಪಾಕಿಸ್ತಾನ ಅಥವಾ ಬಾಂಗ್ಲಾದೇಶದಿಂದ ಬಂದಿಲ್ಲ. ದೇಶದ ಯಾವುದೇ ಭಾಗಕ್ಕೆ ಬೇಕಿದ್ದರೂ ಹೋಗಿ ವ್ಯಾಪಾರ ಮಾಡುವ ಹಕ್ಕು ಎಲ್ಲರಂತೆ ನಮಗೂ ಇದೆ. ನಾವಿಲ್ಲಿ ಎಲ್ಲರ ಜೊತೆ ತುಂಬಾ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದೇವೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಮಾರ್ವಾಡಿ ಸಮುದಾಯವನ್ನು ದೂಷಿಸುವುದು ಸರಿಯಲ್ಲ.’ ಎಂದು ನಾರಾಯಣ ಸಿಂಗ್ ಹೇಳಿದರು.
ನಮ್ಮ ತಪ್ಪಿದ್ದರೆ ನಮ್ಮ ವಿರುದ್ಧ ಯಾರಾದರೂ ಕಾನೂನು ಹೋರಾಟ ಮಾಡುವುದಾದರೆ ಮಾಡಲಿ. ಆದರೆ ಸುಮ್ಮನೆ ಅಪಪ್ರಚಾರ ಮಾಡಿದರೆ ಸಹಿಸುವುದಿಲ್ಲ. ಈ ರೀತಿ ಅಪಪ್ರಚಾರ ಮಾಡಿದವರು ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆಯನ್ನೂ ನೀಡಿದರು.







