ಒಂದು ಲಕ್ಷಕ್ಕೂ ಅಧಿಕ ಮಂದಿಯ ಸಾವಿಗೆ ಯಾರು ಹೊಣೆ: ಕೇಂದ್ರ ಸರಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು, ಅ. 27: ಕೊರೋನ ವೈರಸ್ ಸೋಂಕಿನಿಂದ ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಅದಕ್ಕೆ ಯಾರು ಹೊಣೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಪಿಎಂ ಮುಖಂಡ ಮಾರುತಿ ಮಾನ್ಪಡೆ ಸಾವಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರೇ ಕಾರಣ ಎಂಬ ಕೇಂದ್ರ ಸಚಿವ ಸದಾನಂದಗೌಡ ಅವರ ಹೇಳಿಕೆ ಬಾಲಿಶತನದ್ದು. ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದವರು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು. ಇದರಿಂದಾಗಿಯೇ ರೈತರು ಬೀದಿಗೆ ಇಳಿಯುವಂತಾಯಿತು. ಹೀಗಾಗಿ ಮಾನ್ಪಡೆಯವರ ಸಾವಿಗೆ ಕೇಂದ್ರ ಹಾಗೂ ರಾಜ್ಯ ಸರಕಾರವೇ ನೇರ ಕಾರಣ ಎಂದು ದೂರಿದರು.
ತುಮಕೂರು ಜಿಲ್ಲೆಯ ಶಿರಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆಯನ್ನೇ ಹರಿಸುತ್ತಿದೆ. ಕೆ.ಆರ್.ಪೇಟೆ ಕ್ಷೇತ್ರದಲ್ಲಿಯೂ ಇದೇ ರೀತಿ ಹಣ ಹಂಚಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ, ಶಿರಾ ಮತ್ತು ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಕೊರೋನ ಸೋಂಕಿನಿಂದ ರಾಜ್ಯದ ಜನತೆ ಸಂಕಷ್ಟ ಅನುಭವಿಸಿದರು. ಆದರೆ, ಬಿಜೆಪಿಗೆ ಕೊರೋನ ಸೋಂಕು ಹಬ್ಬವಾಗಿ ಪರಿಣಮಿಸಿತು. ಹೀಗಾಗಿಯೇ ವೈದ್ಯ ಉಪಕರಣಗಳ ಖರೀದಿ ಹೆಸರಲ್ಲಿ ಹಣ ಲೂಟಿ ಮಾಡಿದರು. ಯಡಿಯೂರಪ್ಪ ಅವರು ಚೆಕ್ ಮೂಲಕ ಲಂಚ ಪಡದರೆ ಅವರ ಮೊಮ್ಮಗ ಶಶಿಧರ ಮರಡಿ ಆರ್‍ಟಿಜಿಎಸ್ ಮೂಲಕ ತೆಗೆದುಕೊಳ್ಳುತ್ತಾರೆ. ಲಂಚ ತೆಗೆದುಕೊಳ್ಳುವ ವಿಚಾರದಲ್ಲಿ ಬಿಜೆಪಿಯವರು ಈಗ ಅಪ್‍ಗ್ರೇಡ್ ಆಗಿದ್ದಾರೆ
-ಸಿದ್ದರಾಮಯ್ಯ, ವಿಪಕ್ಷ ನಾಯಕ







