ಅಂಗಡಿ ಕುಟುಂಬದವರ ಅವಿರೋಧ ಆಯ್ಕೆಗೆ 'ಕೈ' ವರಿಷ್ಠರ ಮನವೊಲಿಸಿ: ಹುಕ್ಕೇರಿಗೆ ಉಮೇಶ್ ಕತ್ತಿ ಮನವಿ

ಬೆಳಗಾವಿ, ಅ. 27: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸುರೇಶ್ ಅಂಗಡಿ ಕುಟುಂಬದ ಸದಸ್ಯರನ್ನು ಎಲ್ಲ ಪಕ್ಷಗಳು ಒಗ್ಗೂಡಿ ಅವಿರೋಧ ಆಯ್ಕೆ ಮಾಡಬೇಕು ಎಂದು ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಇಂದಿಲ್ಲಿ ಮನವಿ ಮಾಡಿದ್ದಾರೆ.
ಮಂಗಳವಾರ ಹುಕ್ಕೇರಿ ತಾಲೂಕಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕಾಶ್ ಹುಕ್ಕೇರಿ ಅಂಗಡಿ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಿದರೆ ನಾನೇ ಅವರ ಪರ ಪ್ರಚಾರ ಮಾಡುವೆ ಎಂದು ಹೇಳಿದ್ದಾರೆ. ಅವರ ಕುಟುಂಬದ ಸದಸ್ಯರ ಅವಿರೋಧ ಆಯ್ಕೆ ದೃಷ್ಟಿಯಿಂದ ಅಭ್ಯರ್ಥಿ ಹಾಕದಂತೆ ಕಾಂಗ್ರೆಸ್ ಹೈಕಮಾಂಡ್‍ನೊಂದಿಗೆ ಹುಕ್ಕೇರಿ ಚರ್ಚೆ ನಡೆಸಲಿ ಎಂದು ಇಂದಿಲ್ಲಿ ಮನವಿ ಮಾಡಿದರು.
ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಹೇಳಿಕೆಯಿಂದ ನನಗೆ ಸಂತೋಷವಾಗಿದೆ. ಸಚಿವ ಸುರೇಶ ಅಂಗಡಿ ಅವರ ಪತ್ನಿಯನ್ನ ಆಯ್ಕೆ ಮಾಡಿ ಎಲ್ಲರೂ ಸೇರಿ ಹೊಸ ಇತಿಹಾಸ ಸೃಷ್ಟಿಸಬೇಕು. ನಮ್ಮ ಪಕ್ಷದಿಂದ ಸುರೇಶ ಅಂಗಡಿ ಪತ್ನಿಗೆ ಟಿಕೆಟ್ ನೀಡುವಂತೆ ಮನವಿ ಮಾಡುತ್ತೇವೆ. ಬೆಳಗಾವಿ ಲೋಕಸಭೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡದಂತೆ ಪ್ರಕಾಶ ಹುಕ್ಕೇರಿ ನೋಡಿಕೊಳ್ಳಲಿ ಎಂದು ಉಮೇಶ್ ಕತ್ತಿ ಸಲಹೆ ಮಾಡಿದರು.
ಪ್ರಕಾಶ್ ಹುಕ್ಕೇರಿ ಅವರು ಬೆಂಗಳೂರು ಹಾಗೂ ಹೊಸದಿಲ್ಲಿ ಮುಖಂಡರ ಜೊತೆಗೆ ಸಮಾಲೋಚನೆ ನಡೆಸಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕದಂತೆ ಕ್ರಮ ಕೈಗೊಳ್ಳುವ ಸಂಬಂಧ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದ ಉಮೇಶ್ ಕತ್ತಿ, ಕಾಂಗ್ರೆಸ್ ಹಿರಿಯ ಮುಖಂಡ ಪ್ರಕಾಶ ಹುಕ್ಕೇರಿ ಬಿಜೆಪಿಗೆ ಬಂದರೆ ಸ್ವಾಗತ ಮಾಡುತ್ತೇನೆ ಎಂದರು.







