ಮಂಗಳೂರು ಏರ್‌ಪೋರ್ಟ್‌ನಲ್ಲಿ ‘ಸೈಬರ್ ಅಪರಾಧ’ ಕಾರ್ಯಾಗಾರ
ಮಂಗಳೂರು, ಅ.27: ಇಲ್ಲಿನ ಬಜ್ಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಅಧಿಕಾರಿಗಳಿಗೆ ಸೈಬರ್ ಅಪರಾಧಗಳ ಕುರಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಸಹ್ಯಾದಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ, ಸೈಬರ್ ತಜ್ಞ ಡಾ.ಅನಂತ ಪ್ರಭು ಜಿ. ಸಮಗ್ರ ವಾಗಿ ಮಾಹಿತಿ ನೀಡಿದರು.
ಸೈಬರ್ ತಜ್ಞ ಡಾ.ಅನಂತ ಪ್ರಭು ಮಾತನಾಡಿ, ಸೈಬರ್ ದಾಳಿಗಳು ವಾಯುಯಾನ ಕ್ಷೇತ್ರಕ್ಕೆ ಅತಿದೊಡ್ಡ ಅಪಾಯಗಳಲ್ಲಿ ಒಂದಾಗಿದೆ. ನಿರ್ವಹಣಾ ವ್ಯವಸ್ಥೆಗೆ ಗಂಭೀರವಾದ ಹಾನಿಯನ್ನು ಉಂಟುಮಾಡಿ ಲಕ್ಷಾಂತರ ರೂಪಾಯಿಗಳನ್ನು ದೋಚುವುದಲ್ಲದೆ, ಉಗ್ರ ಸಂಘಟನೆಗಳು ವಿಮಾನವನ್ನು ಏರುವ ಅಗತ್ಯವೂ ಇಲ್ಲದೆ ತಮ್ಮ ಗುರಿ ಸಾಧಿಸಲು ಈ ಸೈಬರ್ ದಾಳಿಗಳು ಬಳಕೆಯಾಗುತ್ತವೆ. ಕೆಲವು ವರ್ಷಗಳಿಂದ ಈಚೆಗೆ ಸೈಬರ್ ದಾಳಿಗಳ ಪ್ರಮಾಣ ಜಾಗತಿಕವಾಗಿ ಗರಿಷ್ಠ ಏರಿಕೆ ಕಂಡಿರುವುದು ದುರಂತ ಎಂದರು.
ವಾಣಿಜ್ಯ ಉದ್ದೇಶದ ವಿಮಾನ ನಿಲ್ದಾಣಗಳಲ್ಲಿ ಸೈಬರ್ ಸುರಕ್ಷತಾ ಕ್ರಮಗಳ ಅನುಷ್ಠಾನದ ಪ್ರಮಾಣ, ‘ಐಒಟಿ’ ಮತ್ತು ಸ್ಮಾರ್ಟ್ ಸಾಧನಗಳ ಸ್ಥಾಪನೆ ಹಾಗೂ ಬಳಕೆಯಿಂದ ಒದಗುವ ದುರುದ್ದೇಶಪೂರಿತ ಬೆದರಿಕೆಗಳು, ದುರುದ್ದೇಶಪೂರಿತ ದಾಳಿಗಳಿಂದ ಆಗಬಹುದಾದ ಅಪಾಯಗಳ ವಿಶ್ಲೇಷಣೆ ಮತ್ತು ಅಪಾಯ ತಗ್ಗಿಸುವ ಕ್ರಮಗಳು, ಕಾರ್ಯಾಚರಣೆ ಮತ್ತು ಅತ್ಯಾಧುನಿಕ ವಿಮಾನ ನಿಲ್ದಾಣಗಳಲ್ಲಿ ಬಲಿಷ್ಠ ಸೈಬರ್ ಸುರಕ್ಷತೆ ಆಡಳಿತವನ್ನು ಅಭಿವೃದ್ಧಿಪಡಿಸುವ ತಂತ್ರಗಳು, ಕಾರ್ಯಾಚರಣೆ ಮೂಲಕ ಸೈಬರ್ ಸೆಕ್ಯೂರಿಟಿ ವಿಧಾನ ಬಲಪಡಿಸಿ, ಸೈಬರ್ ದಾಳಿಯ ಅಪಾಯ ನಿವಾರಿಸುವ ಕ್ರಮಗಳ ಬಗ್ಗೆ ಕಾರ್ಯಾಗಾರದಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.
ಮಂಗಳೂರಿನ ಹಳೆಯ ವಿಮಾನ ನಿಲ್ದಾಣದ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ವಿವಿಧ ಹಂತಗಳ ಸುಮಾರು 150 ಅಧಿಕಾರಿಗಳು ಭಾಗವಹಿಸಿದ್ದರು.
ಸಿಐಎಸ್‌ಎಫ್/ಸಿಎಎಸ್‌ಒ ಡೆಪ್ಯೂಟಿ ಕಮಾಂಡೆಂಟ್ ಕೃಷ್ಣ ಪ್ರಕಾಶ್, ಸಿಐಎಸ್‌ಎಸ್ ಸಹಾಯಕ ಕಮಾಂಡೆಂಟ್ ಸಮರ್ಥ ರಂಗಿ ನೀಲಕಂಠ್, ಸಂಪರ್ಕ ಅಧಿಕಾರಿ ಗೋಪಾಲಕೃಷ್ಣ, ಕೀರ್ತನ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.