ಬಿಜೆಪಿಯವರು ಕೊರೋನ ಹೆಸರಲ್ಲಿ ಹೊಡೆದ ಹಣ ಶಿರಾ, ಆರ್.ಅರ್.ನಗರದಲ್ಲಿ ಹಂಚುತ್ತಿದ್ದಾರೆ: ಬ್ರಿಜೇಶ್ ಕಾಳಪ್ಪ

ಮೈಸೂರು,ಅ.27: ಕೊರೋನ ಹೆಸರಿನಲ್ಲಿ ವೆಂಟಿಲೇಟರ್, ಮಾಸ್ಕ್, ಗ್ಲೌಸ್, ಬೆಡ್ ಮತ್ತು ದಿಂಬಿನ ಖರೀದಿಯಲ್ಲಿ ಹೊಡೆದ ಹಣವನ್ನು ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿಯವರು ಖರ್ಚು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಶಿರಾ ಮತ್ತು ಆರ್.ಆರ್. ನಗರ ಕ್ಷೇತ್ರಗಳಲ್ಲಿ ದುಡ್ಡಿನ ಹೊಳೆಯನ್ನೇ ಹರಿಸುತ್ತಿದ್ದಾರೆ. ವಿಜಯೇಂದ್ರ ಅವರು ಶಿರಾ ದಲ್ಲಿ ಕುಳಿತು ದುಡ್ಡಿನ ಪ್ರವಾಹವನ್ನೇ ಹರಿಸುತ್ತಿದ್ದಾರೆ. ಇವರು ದುಡ್ಡು ಹಂಚುತ್ತಿರುವುದನ್ನು ನೋಡಿ ನಮ್ಮ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರೇ ಬೆಚ್ಚಿದ್ದಾರೆ ಎಂದು ಹೇಳಿದರು.
ಇವರು ಎಷ್ಟೇ ಹಣದ ಹೊಳೆಯನ್ನು ಹರಿಸಿದರು ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಟಿ.ಬಿ.ಜಯಚಂದ್ರ ಸಚಿವರಾಗಿದ್ದ ವೇಳೆ ಶಿರಾಗೆ 1 ಟಿ.ಎಂ.ಸಿ ಕಾವೇರಿ ನೀರನ್ನು ಕೊಂಡೊಯ್ದಿದ್ದಾರೆ. ಅಲ್ಲಿನ ಜನ ಆಧುನಿಕ ಭಗೀರಥ ಎಂದು ಕರೆಯುತ್ತಿದ್ದಾರೆ. ಆರ್.ಆರ್.ನಗರದ ಅಭ್ಯರ್ಥಿ ಪಕ್ಷಕ್ಕೆ ಮೋಸ ಮಾಡಿರುವುದನ್ನು ಜನ ಕಂಡಿದ್ದಾರೆ. ಹಾಗಾಗಿ ಅಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲಾಗಲಿದೆ ಎಂದು ಹೇಳಿದರು.
ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋತರೆ ಸರ್ಕಾರಕ್ಕೇನು ಗಂಡಾಂತರವಿಲ್ಲ. ಆದರೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದಂತು ಸತ್ಯ. ಈ ಹೇಳಿಕೆಯನ್ನು ಅವರ ಪಕ್ಷದ ಮುಖಂಡರುಗಳೇ ನೀಡುತ್ತಿದ್ದಾರೆ. ದುಡ್ಡಿನಿಂದ ಚುನಾವಣೆ ಗೆಲ್ಲುತ್ತೇವೆ ಎಂದು ಬಿಜೆಪಿ ಅಂದುಕೊಂಡಿದ್ದರೆ ಅದು ಅದರ ಭ್ರಮೆ. ಹಾಗಾಗಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರೈತ ಹೋರಾಟಗಾರ ಮಾರುತಿ ಮಾನ್ಪಡೆ ಸಾವಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕಾರಣ ಎಂಬ ಕೇಂದ್ರ ಸಚಿವ ಸದಾನಂದ ಹೇಳಿಕೆಗೆ ತಿರುಗೇಟು ನೀಡಿದ ಬ್ರಿಜೇಶ್ ಕಾಳಪ್ಪ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆಸಿ ಕೊರೋನ ಅಂಟಿಸಿದವರು ಯಾರು ಎಂದು ಪ್ರಶ್ನಿಸಿದರು. ಸದಾನಂದಗೌಡರ ಮಾತಿಗೆ ಅವರ ಪಕ್ಷದಲ್ಲೇ ಬೆಲೆ ಇಲ್ಲ, ಇನ್ನೂ ನಾವ್ಯಾಕೆ ಬೆಲೆ ನೀಡಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಮಂಜುಳಾ ಮಾನಸ, ಹೆಡತಲೆ ಮಂಜುನಾಥ್, ಶಿವಣ್ಣ, ಶಿವು, ಸೇರಿದಂತೆ ಹಲವರು ಉಪಸ್ಥಿತರಿದ್ದರು.







