ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ : 16 ಮಂದಿ ಬಂಧನ
10.67 ಲಕ್ಷ ರೂ. ಮೌಲ್ಯದ ಸೊತ್ತು ವಶ
ಮಂಗಳೂರು, ಅ. 28: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಾಲ್ಕು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳು ದಾಖಲಾಗಿದ್ದು, 16 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಕಮಿಷನರ್ ನಿರ್ದೇಶನದಲ್ಲಿ ಡಿಸಿಪಿಗಳಾದ ಅರುಣಾಂಶುಗಿರಿ, ವಿನಯ್ ಗಾಂವ್ಕರ್ ನೇತೃತ್ವದಲ್ಲಿ ಸಿಸಿಬಿ ತಂಡವು ನಗರದ ವಿವಿಧೆಡೆ ದಾಳಿ ನಡೆಸಿ ನಾಲ್ಕು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳನ್ನು ದಾಖಲಿಸಿದೆ. ಮೂರು ಪ್ರಕರಣಗಳು ಮಂಗಳೂರು ಉತ್ತರ (ಬಂದರ್) ಠಾಣೆ, ಮತ್ತೊಂದು ಪ್ರಕರಣವು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ದಾಖಲಾಗಿದೆ. ಬಂಧಿತ ಆರೋಪಿಗಳಿಂದ 287 ಮೊಬೈಲ್‌ಗಳು, ಎಂಟು ಲಕ್ಷ ರೂ. ಮೌಲ್ಯದ ಕಾರು, 2,67,100 ರೂ. ನಗದು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಮಂಗಳೂರಿನಲ್ಲಿ ರಿಕ್ರಿಯೇಶನ್ ಕ್ಲಬ್‌ಗಳನ್ನು ತೆರೆಯಲು ಯಾವುದೇ ಅರ್ಜಿ ಬಂದಿಲ್ಲ. ನಗರದಲ್ಲಿ ಯಾವುದಾದರೂ ಅನಧಿಕೃತ ಕ್ಲಬ್‌ಗಳು ನಡೆಯುತ್ತಿರುವುದು ಅಥವಾ ಯಾವುದೇ ರೀತಿಯ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿರುವ ಮಾಹಿತಿ ಇದ್ದಲ್ಲಿ ಕೂಡಲೇ ಪೊಲೀಸರನ್ನು ಸಂಪರ್ಕಿಸಬೇಕು.
ಡಿಸಿಪಿಗಳಾದ ಅರುಣಾಂಶುಗಿರಿ (9480802304), ವಿನಯ್ ಗಾಂವ್ಕರ್ (9480802305), ನಗರ ಪೊಲೀಸ್ ಕಂಟ್ರೋಲ್ ರೂಂ (9480802321, 0824- 2220800) ಸಂಖ್ಯೆಗೆ ಮಾಹಿತಿ ನೀಡಬಹುದು. ಮಾಹಿತಿಯನ್ನು ನೀಡುವವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪೊಲೀಸ್ ಆಯುಕ್ತ ವಿಕಾಸ್‌ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







