ಬಾಲಕೋಟ್ ದಾಳಿಯ ಬಳಿಕ ಪಾಕ್‌ನ ಮುಂಚೂಣಿ ತುಕಡಿಗಳ ನಿರ್ನಾಮಕ್ಕೆ ಸಿದ್ಧರಾಗಿದ್ದೆವು: ವಾಯುಪಡೆ ನಿವೃತ್ತ ಮುಖ್ಯಸ್ಥ ಧನೋವ

ಹೊಸದಿಲ್ಲಿ, ಅ.29: ಬಾಲಕೋಟ್‌ನ ಮೇಲೆ ಭಾರತದ ವಾಯುಪಡೆ ನಡೆಸಿದ್ದ ವಾಯುದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಸೇನೆ ಪ್ರತ್ಯುತ್ತರ ನೀಡಿದ್ದರೆ ಅವರ ಮುಂಚೂಣಿ ಸೇನಾ ತುಕಡಿಗಳನ್ನು ನಿರ್ನಾಮಗೊಳಿಸಲು ಭಾರತ ಸಿದ್ಧವಾಗಿತ್ತು. ಆ ಸಂದರ್ಭ ಭಾರತದ ಸೇನೆಯ ನಿಲುವು ಬಹಳ ಆಕ್ರಮಣಕಾರಿಯಾಗಿತ್ತು ಎಂದು ವಾಯುಪಡೆಯ ನಿವೃತ್ತ ಮುಖ್ಯಸ್ಥ ಬಿಎಸ್ ಧನೋವಾ ಗುರುವಾರ ಹೇಳಿದ್ದಾರೆ.
‘ವಿಂಗ್ ಕಮಾಂಡರ್ ಅಭಿನಂದನ್‌ರನ್ನು ತಕ್ಷಣ ಬಿಡುಗಡೆಗೊಳಿಸದಿದ್ದರೆ ಇಂದು ರಾತ್ರಿ 9 ಗಂಟೆಯೊಳಗೆ ಭಾರತ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ವಿದೇಶ ವ್ಯವಹಾರ ಸಚಿವ ಶಾ ಮಹ್ಮೂದ್ ಖುರೇಶಿ ಭೀತಿ ವ್ಯಕ್ತಪಡಿಸಿದ್ದರು. ಆಗ ಅವರ ಕಾಲುಗಳು ನಡುಗುತ್ತಿದ್ದವು’ ಎಂದು ಬುಧವಾರ ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿದ್ದ ಪಿಎಂಎಲ್-ಎನ್ ನಾಯಕ ಅಯಾಝ್ ಸಾದಿಕ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಧನೋವಾ ‘ಆಗ ಭಾರತದ ಸೇನೆಯ ಪ್ರತಿಕ್ರಿಯೆ ಬಹಳ ಆಕ್ರಮಣಕಾರಿಯಾಗಿತ್ತು. ಫೆಬ್ರವರಿ 27ರಂದು ಪಾಕ್ ಸೇನೆ ನಮ್ಮ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದರೆ ಆಗ ಅವರ ಮುಂಚೂಣಿ ನೆಲೆಗಳನ್ನು ನಿರ್ನಾಮ ಮಾಡಲು ನಾವು ಸಿದ್ಧರಿದ್ದೆವು. ನಮ್ಮ ಸಾಮರ್ಥ್ಯವೇನೆಂದು ಅವರಿಗೆ ತಿಳಿದಿತ್ತು’ ಎಂದರು. ತಾನು ಹಾಗೂ ಅಭಿನಂದನ್ ತಂದೆ ಒಟ್ಟಿಗೇ ಸೇವೆ ಸಲ್ಲಿಸಿದ್ದೆವು. ಅಭಿನಂದನ್‌ರನ್ನು ಖಂಡಿತಾ ಸುರಕ್ಷಿತವಾಗಿ ಕರೆತರುತ್ತೇವೆ ಎಂದವರಿಗೆ ಮಾತು ಕೊಟ್ಟಿದ್ದೆ.
ಈ ಹಿಂದೆ ಕಾರ್ಗಿಲ್ ಯುದ್ಧದ ಸಂದರ್ಭ ಫ್ಲೈಟ್ ಕಮಾಂಡರ್ ಅಹುಜಾರನ್ನು ಪಾಕ್ ಸೇನೆ ಸೆರೆಹಿಡಿದ ಬಳಿಕ ಗುಂಡಿಕ್ಕಿ ಹತ್ಯೆ ಮಾಡಿತ್ತು. ಆದರೆ ಅಭಿನಂದನ್ ವಿಷಯದಲ್ಲಿ ಹಾಗೆ ಆಗದು ಎಂದವರಿಗೆ ಭರವಸೆ ನೀಡಿದ್ದೆ. ಯಾಕೆಂದರೆ ಈ ಬಾರಿ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಮತ್ತು ರಾಜಕೀಯ ಒತ್ತಡವಿತ್ತು. ಜೊತೆಗೆ ಭಾರತದ ಸೇನೆಯ ನಿಲುವು ಆಕ್ರಮಣಕಾರಿಯಾಗಿತ್ತು ಎಂದು ಧನೋವಾ ಹೇಳಿದರು. ಅಭಿನಂದನ್ ಬಿಡುಗಡೆಗೆ ಭಾರತದ ಸೇನಾ ದಾಳಿಯ ಅಗತ್ಯವಿಲ್ಲ. ಪಾಕಿಸ್ತಾನದ ಸೇನೆಯ ಮೇಲೆ ಒತ್ತಡ ಹಾಕುವ ಮೂಲಕ ಇದನ್ನು ಸಾಧಿಸಬಹುದು ಎಂಬ ನಿರ್ಧಾರಕ್ಕೆ ಬರಲಾಯಿತು ಎಂದು ಧನೋವಾ ಹೇಳಿದ್ದಾರೆ. ಬಾಲಕೋಟ್ ಮೇಲೆ ವಾಯುದಾಳಿ ನಡೆದ ಸಂದರ್ಭ ಧನೋವಾ ವಾಯುಪಡೆ ಮುಖ್ಯಸ್ಥರಾಗಿದ್ದರು.







