ಉನ್ನಾವೊ ಮಾಜಿ ಸಂಸದೆ ಅನ್ನು ಟಂಡನ್ ಕಾಂಗ್ರೆಸ್ಗೆ ರಾಜೀನಾಮೆ
ಲಕ್ನೋ, ಅ. 29: ಕಾಂಗ್ರೆಸ್ನ ಹಿರಿಯ ನಾಯಕಿ ಹಾಗೂ ಉನ್ನಾವೊದ ಮಾಜಿ ಸಂಸದೆ ಅನ್ನು ಟಂಡನ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ರಾಜ್ಯ ಮಟ್ಟದ ನಾಯಕತ್ವದೊಂದಿಗಿನ ಹೊಂದಾಣಿಕೆಯ ಕೊರತೆ ಕಾರಣ ಎಂದು ಅವರು ಹೇಳಿದ್ದಾರೆ.
ಅನ್ನು ಟಂಡನ್ ಅವರ ರಾಜೀನಾಮೆ ಕಾಂಗ್ರೆಸ್ಗೆ ಮತ್ತೊಂದು ಹಿನ್ನಡೆಯಾಗಿದೆ. ಪತ್ರಿಕಾ ಹೇಳಿಕೆಯಲ್ಲಿ ಅನ್ನು ಟಂಡನ್, ತಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ರಾಜೀನಾಮೆಯನ್ನು ಕೂಡಲೇ ಸ್ವೀಕರಿಸುವಂತೆ ಮನವಿ ಮಾಡಿದ್ದೇನೆ ಎಂದಿದ್ದಾರೆ. ಕಾಂಗ್ರೆಸ್ನಲ್ಲಿರುವ ಕಳೆದ 15 ವರ್ಷ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಂದ ನಿರಂತರ ಪ್ರೀತಿ ಹಾಗೂ ಸಲಹೆ ಪಡೆದಿದ್ದೆ ಎಂದು ಅವರು ಹೇಳಿದ್ದಾರೆ. ‘‘ಪಕ್ಷದ ರಾಜ್ಯ ನಾಯಕತ್ವ ಕೇವಲ ಸಾಮಾಜಿಕ ಮಾಧ್ಯಮ ನಿರ್ವಹಣೆ ಹಾಗೂ ಸ್ವಯಂ ಬ್ರ್ಯಾಂಡ್ ಮಾಡಿಕೊಳ್ಳುವ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಿದೆ. ಇದು ಪಕ್ಷದಲ್ಲಿ ವಿಭಜನೆ ಉಂಟು ಮಾಡಿದೆ’’ ಎಂದು ಅನ್ನು ಟಂಡನ್ ಹೇಳಿದ್ದಾರೆ.