ಹೊಸ ನೋಟಿನಲ್ಲಿ ಭಾರತದ ಭೌಗೋಳಿಕ ಗಡಿಯನ್ನು ತಪ್ಪಾಗಿ ಮುದ್ರಿಸಿದ ಸೌದಿ ಅರೇಬಿಯ
ವಿದೇಶಾಂಗ ಸಚಿವಾಲಯ ಗಂಭೀರ ಕಳವಳ

ಹೊಸದಿಲ್ಲಿ: ಭಾರತದ ಭೌಗೋಳಿಕ ಗಡಿಗಳನ್ನು ತಪ್ಪಾಗಿ ಚಿತ್ರಿಸಿದ ಬ್ಯಾಂಕ್ ನೋಟನ್ನು ಇತ್ತೀಚೆಗೆ ಬಿಡುಗಡೆ ಮಾಡಿದ ಸೌದಿ ಅರೇಬಿಯದ ಬಗ್ಗೆ ಭಾರತ ತನ್ನ 'ಗಂಭೀರ ಕಳವಳ' ವ್ಯಕ್ತಪಡಿಸಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ.
ಸೌದಿ ಬಿಡುಗಡೆ ಮಾಡಿರುವ ನೋಟಿನಲ್ಲಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ನ್ನು ಭಾರತದಿಂದ ಹೊರಗಿಟ್ಟಿರುವಂತೆ ಕಾಣಿಸುತ್ತಿದೆ.
ಜಿ20ಯಲ್ಲಿ ಸೌದಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೌದಿ ಅರೇಬಿಯದ ಹಣಕಾಸು ಪ್ರಾಧಿಕಾರವು ಅಕ್ಟೋಬರ್ 24 ರಂದು ನೋಟನ್ನು ಬಿಡುಗಡೆ ಮಾಡಿತ್ತು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸೌದಿ ಅರೇಬಿಯದ ಅಧಿಕೃತ ಹಾಗೂ ಕಾನೂನುಬದ್ಧ ನೋಟಿನಲ್ಲಿ ಭಾರತದ ಭೌಗೋಳಿಕ ಗಡಿಗಳನ್ನು ಸಂಪೂರ್ಣವಾಗಿ ತಪ್ಪಾಗಿ ತೋರಿಸಿದ್ದಕ್ಕಾಗಿ ರಿಯಾದ್‌ನಲ್ಲಿರುವ ಹಾಗೂ ಹೊಸದಿಲ್ಲಿಯಲ್ಲಿರುವ ರಾಯಭಾರಿಗಳ ಮೂಲಕ ಸೌದಿ ಅರೇಬಿಯಕ್ಕೆ ನಮ್ಮ ಕಳವಳವನ್ನು ವ್ಯಕ್ತಪಡಿಸಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ತುರ್ತು ಕ್ರಮ ತೆಗೆದುಕೊಳ್ಳುವಂತೆ ಸೌದಿ ಅರೇಬಿಯವನ್ನು ಕೇಳಿಕೊಂಡಿದ್ದೇವೆ ಎಂದು ಸಚಿವಾಲಯ ತಿಳಿಸಿದೆ.





