ತೊಡಿಕಾನ ದೇವರಗುಂಡಿ ಫಾಲ್ಸ್ನಲ್ಲಿ ಬಿಕಿನಿ ಫೋಟೊಶೂಟ್: ಸ್ಥಳೀಯರ ಆಕ್ರೋಶ

ಸಾಂದರ್ಭಿಕ ಚಿತ್ರ
ಸುಳ್ಯ, ಅ.30: ಇಲ್ಲಿನ ತೊಡಿಕಾನದ ದೇವರಗುಂಡಿ ಫಾಲ್ಸ್ ಬಳಿ ಬೆಂಗಳೂರಿನ ಮಾಡೆಲ್ಗಳು ಬಂದು ಬಿಕಿನಿ ಫೋಟೊಶೂಟ್ ಮಾಡಿಸಿಕೊಂಡಿದ್ದು, ಇದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸುಳ್ಯ ತಾಲೂಕಿನ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಬಂಧಪಟ್ಟ ದೇವರಗುಂಡಿ ಫಾಲ್ಸ್ ಬಳಿ ಬೆಂಗಳೂರಿನ ಮಾಡೆಲ್ಗಳು ಬಂದು ಬಿಕಿನಿ ಫೋಟೊಶೂಟ್ ಮಾಡಿಸಿಕೊಂಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ತಿಂಗಳ ಹಿಂದೆ ಈ ಫೋಟೊ ಶೂಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ವಿಡಿಯೋಗಳು ಇದೀಗ ಜಾಲತಾಣದಲ್ಲಿ ವೈರಲ್ ಆಗಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ದೇವರಗುಂಡಿ ಜಲಪಾತದ ಸನಿಹದಲ್ಲೇ ಮಲ್ಲಿಕಾರ್ಜುನ ದೇವಸ್ಥಾನವಿದ್ದು, ಸಾಕ್ಷಾತ್ ಶಿವನೇ ಈ ಜಲಪಾತದಲ್ಲಿ ಸ್ನಾನಕ್ಕೆ ಆಗಮಿಸುತ್ತಿದ್ದರು ಎನ್ನುವ ನಂಬಿಕೆ ಸ್ಥಳೀಯ ಭಕ್ತರಲ್ಲಿದೆ. ಆದ್ದರಿಂದ ಇಲ್ಲಿ ಗುಪ್ತವಾಗಿ ಬಿಕಿನಿ ಫೋಟೊಶೂಟ್ ಮಾಡಿರುವುದು ಸರಿಯಲ್ಲ ಎಂಬುದು ಇದನ್ನು ವಿರೋಧಿಸುವವರ ಅಭಿಪ್ರಾಯ. ಧಾರ್ಮಿಕ ಕ್ಷೇತ್ರ ಆಗಿರುವುದರಿಂದ ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವು ಕೇಳಿಬರುತ್ತಿದೆ.





