ಆರೆಸ್ಸೆಸ್ ಸಂಘಟನೆ ನೋಂದಣಿಯಾಗಿಲ್ಲ: ಬಿ.ಕೆ. ಹರಿಪ್ರಸಾದ್ ಪ್ರಶ್ನೆಗೆ ಸಹಕಾರ ಸಚಿವಾಲಯದ ಉತ್ತರ
‘ವಾರ್ಷಿಕ ಲೆಕ್ಕ ಪತ್ರ ಸಲ್ಲಿಸುತ್ತಿದೆಯೇ’ ಎಂಬ ಪ್ರಶ್ನೆಗೆ ಉತ್ತರಿಸದೆ ನುಣುಚಿಕೊಂಡ ರಾಜ್ಯ ಸರಕಾರ

ಬೆಂಗಳೂರು: ಆರೆಸ್ಸೆಸ್ ಸಂಘಟನೆಯು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ ನೋಂದಾಯಿಸಲ್ಪಟ್ಟಿಲ್ಲ ಎನ್ನುವುದು ರಾಜ್ಯ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಕೇಳಿದ್ದ ಪ್ರಶ್ನೆಗೆ ರಾಜ್ಯ ಸಹಕಾರ ಸಚಿವಾಲಯ ನೀಡಿದ ಉತ್ತರದಿಂದ ತಿಳಿದು ಬಂದಿದೆ.
ಆದರೆ ಹರಿಪ್ರಸಾದ್ ಅವರು ಕೇಳಿದ ಇತರ ಮೂರು ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸದೆ ಸಚಿವಾಲಯ ನುಣುಚಿಕೊಂಡಿದೆ.
ವಿಧಾನಪರಿಷತ್ ಅಧಿವೇಶದ ಸಂದರ್ಭ ಬಿ.ಕೆ. ಹರಿಪ್ರಸಾದ್ ಆರೆಸ್ಸೆಸ್ ಗೆ ಸಂಬಂಧಿಸಿ 4 ಪ್ರಶ್ನೆಗಳನ್ನು ಕೇಳಿದ್ದರು. ಈ ಪೈಕಿ ‘ರಾಷ್ಟ್ರೀಯ ಸ್ವಯಂಸೇವಕ ಸಂಘ ನೋಂದಣಿಯಾಗಿದೆಯೇ?’ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಸಚಿವಾಲಯ, 'ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ ನೋಂದಣಿಯಾಗಿಲ್ಲ' ಎಂದಿದೆ.
ಇನ್ನುಳಿದಂತೆ 3 ಪ್ರಶ್ನೆಗಳಾದ
► ಸದಸ್ಯತ್ವದ ಪಟ್ಟಿ ಸರಕಾರಕ್ಕೆ ಸಲ್ಲಿಸಿ ಸಂವಿಧಾನ ಬದ್ಧವಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಸಂಘದ ಚುನಾವಣೆ ನಡೆಯುತ್ತಿದೆಯೇ ಮತ್ತು ವಾರ್ಷಿಕ ಲೆಕ್ಕ ಪತ್ರ ಸರಕಾರಕ್ಕೆ ಸಲ್ಲಿಕೆಯಾಗುತ್ತಿದೆಯೇ?
► ಸದರಿ ಸಂಘಟನೆಯ ರಾಜ್ಯದಲ್ಲಿ ಸ್ವಂತ ಅಥವಾ ಬಾಡಿಗೆ ಕಚೇರಿ ಹೊಂದಿದೆಯೇ?
► ವಿಳಾಸವೇ ಇಲ್ಲದ, ನೋಂದಣಿಯಾಗದ, ಸದಸ್ಯತ್ವದ ಪಟ್ಟಿ ಸಲ್ಲಿಸದ, ಸಂವಿಧಾನ ಬದ್ಧವಾಗಿ ಚುನಾವಣೆ ನಡೆಸದ, ಸಂಘಟನೆಯ ಆದಾಯ ಖರ್ಚು ವೆಚ್ಚಗಳ ಬಗ್ಗೆ ಸರಕಾರಕ್ಕೆ ಉತ್ತರದಾಯಿತ್ವ ಸಲ್ಲಿಸದ ಸಂಘಟನೆಗಳು ಸರಕಾರಕ್ಕೆ ಅರ್ಥಾತ್ ಸಮಾಜಕ್ಕೆ ವಂಚಿಸಿದಂತಿದ್ದು, ಸಮಾಜಹಿತ ಕಾಪಾಡಬಲ್ಲರೇ?
ಎನ್ನುವ ಪ್ರಶ್ನೆಗಳಿಗೆ, ‘ಅನ್ವಯಿಸುವುದಿಲ್ಲ’ ಎನ್ನುವ ಉತ್ತರ ನೀಡಿ ನುಣುಚಿಕೊಂಡಿದೆ. ಆರೆಸ್ಸೆಸ್ ವಿರುದ್ಧ ಸರಕಾರಕ್ಕೆ ದೂರುಗಳು ಬಂದಿವೆಯೇ ಎನ್ನುವ ಪ್ರಶ್ನೆಗೆ ‘ಇಲ್ಲ’ ಎಂದು ಉತ್ತರಿಸಲಾಗಿದೆ.
ಸಂವಿಧಾನಬದ್ಧವಾಗಿ ಸಂಘದ ಚುನಾವಣೆ ನಡೆಯುತ್ತಿದೆಯೇ ಎನ್ನುವ ಪ್ರಶ್ನೆಗೆ, ಆದಾಯ ಖರ್ಚುವೆಚ್ಚಗಳ ಬಗ್ಗೆ ಸರಕಾರಕ್ಕೆ ಉತ್ತರದಾಯಿತ್ವ ಸಲ್ಲಿಸದ ಸಂಘಟನೆಗಳು ಸಮಾಜಕ್ಕೆ ವಂಚಿಸಿದಂತಲ್ಲವೇ ಎನ್ನುವ ಪ್ರಶ್ನೆಗಳಿಗೆ ಸಹಕಾರ ಸಚಿವಾಲಯವು ಯಾವುದೇ ಉತ್ತರವನ್ನು ನೀಡದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ನೋಂದಣಿಯಾಗದೆ ಇರುವುದರಿಂದ ಆರೆಸ್ಸೆಸ್ ಸರಕಾರಕ್ಕೆ ವರದಿ ಸಲ್ಲಿಸುವ ಪ್ರಮೇಯ ಎದುರಾಗಿಲ್ಲ: ಸಚಿವ ಸೋಮಶೇಖರ್
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ರಾಜ್ಯ ಸರಕಾರಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದ ವಿರುದ್ಧ ಯಾವುದೇ ದೂರುಗಳು ಬಂದಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿಯಲ್ಲಿ ನೋಂದಣಿ ಆಗಿಲ್ಲ. ಆದುದರಿಂದ, ಸರಕಾರಕ್ಕೆ ವಾರ್ಷಿಕ ಲೆಕ್ಕಪತ್ರಗಳನ್ನು ಅಥವಾ ಸದಸ್ಯರ ಪಟ್ಟಿಯನ್ನು ಮೂರು ವರ್ಷಗಳಿಗೊಮ್ಮೆ ಸಲ್ಲಿಸುವ ಪ್ರಶ್ನೆ ಎದುರಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.







