ನೋಂದಣಿಯಾಗದ ಆರೆಸ್ಸೆಸ್ ನ ಆದಾಯ ಮೂಲ ಯಾವುದು: ಬಿ.ಕೆ.ಹರಿಪ್ರಸಾದ್ ಪ್ರಶ್ನೆ

ಬೆಂಗಳೂರು, ಅ.30: ‘‘ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸೆಸ್ಸ್) ಪಂಚತಾರಾ(ಫೈವ್ ಸ್ಟಾರ್) ಸಂಘಟನೆಯೇ? ಈ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸರಕಾರದ ಜಾಣ ಮೌನವೇಕೆ?’’ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆರೆಸೆಸ್ಸ್ ನೋಂದಾಯಿತ ಸಂಘಟನೆಯೆ? ಅದು ಪ್ರತಿ ವರ್ಷ ಸರಕಾರಕ್ಕೆ ವಾರ್ಷಿಕ ಲೆಕ್ಕಪತ್ರಗಳನ್ನು ಸಲ್ಲಿಸುತ್ತಿದೆಯೇ?, ರಾಜ್ಯದಲ್ಲಿ ಸ್ವಂತ ಹಾಗೂ ಬಾಡಿಗೆ ಕಚೇರಿಗಳನ್ನು ಎಷ್ಟು ಹೊಂದಿದೆ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಸರಕಾರ ‘ಆರೆಸೆಸ್ಸ್ ಸಂಘಟನೆ ನೋಂದಣಿ ಆಗಿಲ್ಲ’ ಎಂದು ಉತ್ತರಿಸಿದೆ ಎಂದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ಸುಮಾರು ಒಂದು ಲಕ್ಷ ಎನ್‌ಜಿಒಗಳ ಪರವಾನಿಗೆಯನ್ನು ರದ್ದುಪಡಿಸಿದೆ. ಆದರೆ, ಬೃಹತ್ ಪ್ರಮಾಣದಲ್ಲಿ ದೇಣಿಗೆಯನ್ನು ಸಂಗ್ರಹಿಸಿ, ಚಟುವಟಿಕೆಗಳನ್ನು ನಡೆಸುತ್ತಿರುವ ಆರೆಸೆಸ್ಸ್ ಬಗ್ಗೆ ಯಾಕೆ ಮೌನ ವಹಿಸಿದೆ ಎಂಬುದಕ್ಕೆ ಉತ್ತರ ಸಿಗಬೇಕಿದೆ ಎಂದು ಹೇಳಿದರು.
ಆರೆಸೆಸ್ಸ್ ನೋಂದಣಿಯಾಗದೆ ಇರುವ ಸಂಸ್ಥೆ ಎಂದು ಸರಕಾರ ಒಪ್ಪಿಕೊಂಡಿದೆ. ಆದರೆ, ಈ ಸಂಘಟನೆಗೆ ಇರುವ ಆದಾಯದ ಮೂಲ ಯಾವುದು? ರಾಷ್ಟ್ರೋತ್ಥಾನ, ಕೇಶವಕೃಪಾ ಇವೆಲ್ಲ ಆರೆಸೆಸ್ಸ್‌ಗೆ ಸೇರಿದ್ದಾಗಿದೆ. ಇದೀಗ ತುಮಕೂರಿನಲ್ಲೂ ಆರೆಸೆಸ್ಸ್ ಕಟ್ಟವೊಂದನ್ನು ನಿರ್ಮಾಣ ಮಾಡುತ್ತಿದೆ. ಆದರೆ, ಸರಕಾರಕ್ಕೆ ಮಾತ್ರ ಆರೆಸೆಸ್ಸ್ ಬಳಿ ಇರುವ ಸ್ವಂತ, ಬಾಡಿಗೆ ಕಟ್ಟಡಗಳ ವಿವರಣೆ ಗೊತ್ತಿಲ್ಲ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಇತರ ಎನ್‌ಜಿಒಗಳ ಮೇಲೆ ಇಲ್ಲಸಲ್ಲದ ಕಾನೂನುಗಳನ್ನು ಹೇರಿ, ಆದಾಯ ತೆರಿಗೆ ಇಲಾಖೆ, ಸಿಬಿಐ ಸೇರಿದಂತೆ ಇನ್ನಿತರ ತನಿಖಾ ಸಂಸ್ಥೆಗಳ ಮೂಲಕ ದಾಳಿ ಮಾಡಿ, ಅವುಗಳ ಆದಾಯದ ಮೂಲ, ಲೆಕ್ಕಾಚಾರದ ಬಗ್ಗೆ ತನಿಖೆಗಳನ್ನು ನಡೆಸುವ ಕೇಂದ್ರ ಸರಕಾರ, ಆರೆಸೆಸ್ಸ್‌ನ ವಿಚಾರ ಬಂದಾಗ ತುಟಿ ಬಿಚ್ಚುವುದಿಲ್ಲ. ಯಾಕೆ ಈ ದ್ವಂದ್ವ ನೀತಿ ? ಎಂದು ಅವರು ಕಿಡಿಕಾರಿದರು.
ಆರೆಸೆಸ್ಸ್ ತನ್ನನ್ನು ದೇಶಪ್ರೇಮಿ ಸಂಘಟನೆ ಎಂದು ಬಿಂಬಿಸಿಕೊಳ್ಳುತ್ತದೆ. ಬೇರೆಯವರಿಗೂ ದೇಶಪ್ರೇಮದ ಪಾಠ ಮಾಡುತ್ತದೆ. ಆದರೆ, ಈ ನೆಲದ ಕಾನೂನಿಗೆ ಗೌರವ ಕೊಟ್ಟು ತಾನು ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಯಾಕೆ ಪಾರದರ್ಶಕತೆ ಕಾಪಾಡುತ್ತಿಲ್ಲ?. ಯಾತಕ್ಕಾಗಿ ಈವರೆಗೆ ಸಂಘಟನೆಯನ್ನು ನೋಂದಣಿ ಮಾಡಿಸಿಲ್ಲ. ಸಂವಿಧಾನಬದ್ಧವಾಗಿ ಮೂರು ವರ್ಷಗಳಿಗೊಮ್ಮೆ ಸಂಘಟನೆಯಲ್ಲಿ ಆಂತರಿಕ ಚುನಾವಣೆಯನ್ನು ಯಾಕೆ ನಡೆಸುತ್ತಿಲ್ಲ? ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ದೇಶದ ಕಾನೂನು ಆರೆಸೆಸ್ಸ್‌ಗೆ ಒಂದು, ಬೇರೆಯವರಿಗೆ ಒಂದು ಇದೆಯೇ? ತನ್ನ ಚಟುವಟಿಕೆಗಳು, ಖರ್ಚು ವೆಚ್ಚಗಳ ಬಗ್ಗೆ ಸರಕಾರಕ್ಕೆ ತಿಳಿಸದೆ, ಸಮಾಜಕ್ಕೆ ತಿಳಿಸದೆ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಿರುವುದರ ಹಿಂದಿನ ರಹಸ್ಯವೇನು ಎಂದು ಅವರು ಪ್ರಶ್ನಿಸಿದರು.







