ಒಂದು ಕೊಲೆ ಮುಚ್ಚಿಹಾಕಲು 9 ಜನರನ್ನು ಸಾಯಿಸಿದ ವ್ಯಕ್ತಿಗೆ ಮರಣ ದಂಡನೆ

ಹೈದರಾಬಾದ್: ಸುಮಾರು ಐದು ತಿಂಗಳ ಹಿಂದೆ 10 ಜನರನ್ನು ಕೊಲೆಗೈದ ಅಪರಾಧಿಗೆ ವಾರಂಗಲ್ ನ ಸ್ಥಳೀಯ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.
ಅಪರಾಧಿ ಸಂಜಯ್ ಕುಮಾರ್ ಯಾದವ್ (24 ವರ್ಷ) ತಾನು ಮಾಡಿದ್ದ ಒಂದು ಕೊಲೆಯನ್ನು ಮುಚ್ಚಿಹಾಕಲು ಒಂಭತ್ತು ಜನರನ್ನು ಕೊಂದಿದ್ದ.
ಸಂಜಯ್ ಗೋಣಿಚೀಲ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ. ಯಾದವ್ ತನ್ನ ಲಿವ್-ಇನ್ -ಪಾರ್ಟ್ನರ್ನ್ನು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ಚಲಿಸುತ್ತಿದ್ದ ರೈಲಿನಿಂದ ತಳ್ಳಿ ಸಾಯಿಸಿದ್ದ. ಈ ಕೊಲೆಯನ್ನು ಮುಚ್ಚಿಹಾಕಲು ಒಂದೇ ಕುಟುಂಬದ ಆರು ಜನರು ಸೇರಿದಂತೆ ಒಟ್ಟು 9 ಜನರಿಗೆ ಆಹಾರಕ್ಕೆ ವಿಷ ಹಾಕಿ ಸಾಯಿಸಿ ಮೃತ ದೇಹಗಳನ್ನು ಬಾವಿಗೆ ಎಸೆದಿದ್ದ.
ಈ ಪ್ರಕರಣದ ಕುರಿತು ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಇದನ್ನು ಅಪರೂಪದಲ್ಲಿ ಅಪರೂಪದ ಘಟನೆ ಎಂದು ಪರಿಗಣಿಸಿ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಕೋರಿದರು.
ಸಂಜಯ್ ಬಿಹಾರ ಮೂಲದವನಾಗಿದ್ದು ಆರು ತಿಂಗಳ ಹಿಂದೆ ವಾರಂಗಲ್ ಗೆ ವಲಸೆ ಹೋಗಿದ್ದ. ಪಶ್ಚಿಮಬಂಗಾಳದಿಂದ ವಾರಂಗಲ್ ಗೆ ವಲಸೆ ಬಂದಿದ್ದ ಸಹೋದ್ಯೋಗಿ ಕುಟುಂಬದೊಂದಿಗೆ ಹತ್ತಿರವಾಗಿದ್ದ. ಬಳಿಕ ಆ ಕುಟುಂಬಕ್ಕೆ ಕಂಟಕವಾದ ಎಂದು ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ.





