ಲಿಫ್ಟ್ ಗಾಗಿ ತೋಡಿದ್ದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಮೃತ್ಯು
ಬೆಂಗಳೂರು, ಅ.30: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗಾಗಿ ತೋಡಿದ್ದ ಗುಂಡಿಯೊಳಗೆ ಎರಡು ವರ್ಷದ ಮಗುವೊಂದು ಆಕಸ್ಮಿಕವಾಗಿ ಬಿದ್ದು, ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿನೋದಾ(2) ಮೃತ ಮಗು ಎಂದು ಪೊಲೀಸರು ಗುರುತಿಸಿದ್ದಾರೆ.
ಕಟ್ಟಡದ ನಿರ್ಮಾಣ ಕೆಲಸಕ್ಕೆ ವಲಸೆ ಬಂದಿದ್ದ ಕಾರ್ಮಿಕರು, ಅಲ್ಲಿಯೇ ಕೃತಕ ಶೆಡ್ ವೊಂದನ್ನು ನಿರ್ಮಿಸಿಕೊಂಡು ವಾಸವಿದ್ದರು. ಗುರುವಾರ ಆಟವಾಡುತ್ತ ಲಿಫ್ಟ್ ಬಳಿ ತೆರಳಿದ ಮಗು ಆಯ ತಪ್ಪಿ ಗುಂಡಿಯೊಳಗೆ ಬಿದ್ದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಮಗುವಿನ ತಂದೆ-ತಾಯಿ ಮೂಲತಃ ಕೊಪ್ಪಳ ಜಿಲ್ಲೆಯವರಾಗಿದ್ದಾರೆ. ಘಟನೆ ಸಂಬಂಧ ಕಟ್ಟಡ ಮಾಲಕನ ವಿರುದ್ಧ ಐಪಿಸಿ ಸೆಕ್ಷನ್ 304(ಎ) ಅಡಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story