ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯಗೆ ಚುನಾವಣಾ ಆಯೋಗದ ನೋಟಿಸ್

ಹೊಸದಿಲ್ಲಿ, ಅ.30: ಕಾಂಗ್ರೆಸ್ ಮುಖಂಡರಾದ ದಿಗ್ವಿಜಯ್ ಸಿಂಗ್ ಮತ್ತು ಕಮಲನಾಥ್‌ರನ್ನು ಚುನ್ನು ಮುನ್ನು ಎಂದು ಉಲ್ಲೇಖಿಸಿದ ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯವರ್ಗೀಯರ ಹೇಳಿಕೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ತರಾಟೆಗೆತ್ತಿಕೊಂಡ ಚುನಾವಣಾ ಆಯೋಗ ಅವರಿಗೆ ನೋಟಿಸ್ ಜಾರಿಗೊಳಿಸಿದೆ.
ಅಲ್ಲದೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸಾರ್ವಜನಿಕ ಸಭೆಗಳಲ್ಲಿ ಇಂತಹ ಪದಗಳನ್ನು ಬಳಸದಂತೆ ಸಲಹೆ ನೀಡಿದೆ. ಇಂದೋರ್‌ನ ಸಾನ್ವರ್‌ನಲ್ಲಿ ಅಕ್ಟೋಬರ್ 14ರಂದು ನಡೆದಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ವಿಜಯ್‌ವರ್ಗೀಯ, ಕಾಂಗ್ರೆಸ್‌ನ ಚುನ್ನು ಮುನ್ನು ಜೋಡಿ ದೇಶದ್ರೋಹಿಗಳು ಎಂದು ಹೇಳಿದ್ದರು ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ಆದರೆ ತನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ . ಚುನಾವಣೆಯ ಗತಿಯನ್ನು ಬದಲಿಸಲು ಕಾಂಗ್ರೆಸ್ ಹೆಣೆದ ತಂತ್ರಗಾರಿಕೆ ಇದಾಗಿದೆ ಎಂದು ವಿಜಯ್‌ವರ್ಗೀಯ ಪ್ರತಿಕ್ರಿಯಿಸಿದ್ದರು. ಮಧ್ಯಪ್ರದೇಶದಲ್ಲಿ 28 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 3ರಂದು ಉಪಚುನಾವಣೆ ನಡೆಯಲಿದೆ.





