ಜಮ್ಮು-ಕಾಶ್ಮೀರದ ವಿಶೇಷ ಸ್ಥಾನ ಮರು ಸ್ಥಾಪಿಸುವವರೆಗೆ ಹೋರಾಟ: ಉಮರ್ ಅಬ್ದುಲ್ಲಾ

ಶ್ರೀನಗರ, ಅ.30: ಜಮ್ಮು- ಕಾಶ್ಮೀರವು 2019ರ ಆಗಸ್ಟ್ 5ಕ್ಕಿಂತ ಮೊದಲು ಇದ್ದ ಸ್ಥಿತಿಗೆ ಮರಳಬೇಕೆಂಬುದು ತಮ್ಮ ದೃಢ ನಿಲುವಾಗಿದ್ದು, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮರು ಸ್ಥಾಪಿಸುವವರೆಗೆ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಉಮರ್ ಅಬ್ದುಲ್ಲಾ ಹೇಳಿದ್ದಾರೆ.
‘ಗುಪ್ಕರ್ ಘೋಷಣೆಗಾಗಿನ ಜನತಾ ಮೈತ್ರಿಕೂಟ’ದ ನಿಯೋಗ ಉಮರ್ ಅಬ್ದುಲ್ಲಾ ನೇತೃತ್ವದಲ್ಲಿ ಶುಕ್ರವಾರ ಲಡಾಖ್ನ ದ್ರಾಸ್ ಪಟ್ಟಣಕ್ಕೆ ಭೇಟಿ ನೀಡಿದ್ದು ಈ ಸಂದರ್ಭ ಅಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಬ್ದುಲ್ಲಾ ಮಾತನಾಡಿದರು. ಈ ಹಿಂದೆಯೂ ರಾಜ್ಯಗಳನ್ನು ವಿಭಜಿಸಿದ ಉದಾಹರಣೆ ಸಾಕಷ್ಟಿದೆ. ಪಂಜಾಬ್ ರಾಜ್ಯವನ್ನು ಮೂರು ರಾಜ್ಯಗಳಾಗಿ, ಬಿಹಾರವನ್ನು ಎರಡು ರಾಜ್ಯಗಳಾಗಿ(ಬಿಹಾರ ಮತ್ತು ಜಾರ್ಖಂಡ್), ಮಧ್ಯಪ್ರದೇಶವನ್ನು ಎರಡು ರಾಜ್ಯವಾಗಿ(ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ), ಆಂಧ್ರವನ್ನು ಎರಡು ರಾಜ್ಯವಾಗಿ(ಆಂಧ್ರ ಮತ್ತು ತೆಲಂಗಾಣ) ವಿಭಜಿಸಲಾಗಿದೆ. ಆಗ ಜನರನ್ನು ವಿಶ್ವಾಸಕ್ಕೆ ಪಡೆದುಕೊಂಡು ಅವರ ಅಭಿಪ್ರಾಯ, ಸಲಹೆ ಕೇಳಲಾಗಿತ್ತು ಮತ್ತು ಜನತೆ ಇದನ್ನು ಬೆಂಬಲಿಸಿದ್ದರು. ಆದರೆ ಜಮ್ಮು-ಕಾಶ್ಮೀರದಲ್ಲಿ ಹೀಗೆ ಮಾಡಿಲ್ಲ. ಇದೇ ಮೊದಲ ಬಾರಿಗೆ ಕೇಂದ್ರ ಸರಕಾರದ ನಿರ್ಧಾರವನ್ನು ರಾಜ್ಯದ ಜನತೆಯ ಮೇಲೆ ಹೇರಲಾಗಿದೆ. ಇದು ಜಮ್ಮು-ಕಾಶ್ಮೀರ ವಿಧಾನಸಭೆಯ ಅಥವಾ ಸಂಸತ್ತಿನ ನಿರ್ಧಾರವಾಗಿರಲಿಲ್ಲ. ಈ ನಿರ್ಣಯಕ್ಕೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಸಹಿ ಹಾಕಿಲ್ಲ. ಈ ಹಕ್ಕನ್ನು ರಾಜ್ಯಪಾಲರು ಅಕ್ರಮವಾಗಿ ಚಲಾಯಿಸಿದ್ದು, ರಾಜ್ಯದ ಜನತೆಯ ಅಭಿಮತ ಪಡೆಯದೆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವೆಂದು ವಿಭಜಿಸಿದ್ದಾರೆ. ಈ ನಿರ್ಧಾರವನ್ನು ನಾವು ಒಪ್ಪುವುದಿಲ್ಲ’ ಎಂದವರು ಹೇಳಿದ್ದಾರೆ.
ಈಗ ಹಿಂದಿನದ್ದನ್ನು ಮರೆತುಬಿಟ್ಟು ರಾಜ್ಯದ ಜನತೆಯ ಹಿತದೃಷ್ಟಿಗಾಗಿ ನಾವೆಲ್ಲಾ ಒಂದಾಗಿದ್ದೇವೆ. ಜಮ್ಮು-ಕಾಶ್ಮೀರವನ್ನು 2019ರ ಆಗಸ್ಟ್ 5ಕ್ಕಿಂತ ಮೊದಲಿದ್ದ ಸ್ಥಿತಿಗೆ ಮರಳಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ನಡೆಸುತ್ತೇವೆ ಎಂದು ಅಬ್ದುಲ್ಲಾ ಹೇಳಿದರು. ಪಿಡಿಪಿ, ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡರೂ ನಿಯೋಗದಲ್ಲಿದ್ದರು.





