ಹೊಸ ಪದ್ಧತಿಯಡಿ ಆಸ್ತಿ ತೆರಿಗೆ ಸಂಗ್ರಹಿಸಲು ಬಿಬಿಎಂಪಿ ತಯಾರಿ

ಬೆಂಗಳೂರು, ಅ.30: ಬಿಬಿಎಂಪಿಯು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸ್ವಂತ ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಹೊಸ ಪದ್ಧತಿ ಅಡಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಿಸಿ ಸಂಗ್ರಹಿಸಲು ತಯಾರಿ ನಡೆಸಲಾಗಿದೆ.
ತೆರಿಗೆ ಪರಿಷ್ಕರಣೆಯಿಂದಾಗಿ ಕಂದಾಯ ವಿಭಾಗದ ವಿಶೇಷ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿಯೊಂದನ್ನು ರಚಿಸಲಾಗಿದೆ. 2021-22 ನೇ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಯಾವ ಮಾದರಿಯಲ್ಲಿ ತೆರಿಗೆ ವಸೂಲಿ ಮಾಡಬೇಕು ಎಂಬುದರ ಕುರಿತು ಸಮಿತಿಯು ಒಂದು ತಿಂಗಳೊಳಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದು, ಮುಂದಿನ ವರ್ಷದಿಂದ ಆಸ್ತಿ ಮಾಲಕರ ಮೇಲೆ ತೆರಿಗೆಯ ಭಾರ ಬೀಳುವ ಸಾಧ್ಯತೆಗಳಿವೆ.
ಕೆಎಂಸಿ ಕಾಯಿದೆ ಪ್ರಕಾರ, ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಚಾಲ್ತಿಯಲ್ಲಿರುವ ಪ್ರದೇಶವಾರು ಯೂನಿಟ್ ದರಗಳ ಆಧಾರದಲ್ಲಿ ಕನಿಷ್ಠ ಶೇ.15 ರಿಂದ ಗರಿಷ್ಠ ಶೇ 30 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಲು ಅವಕಾಶವಿದೆ. ಪಾಲಿಕೆಯು 2008 ರಿಂದ ಸುಮಾರು ಎಂಟು ವರ್ಷಗಳ ಕಾಲ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿರಲಿಲ್ಲ. ಅದಕ್ಕೆ ಸರಕಾರ ಮತ್ತು ಲೆಕ್ಕ ಪರಿಶೋಧಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ 2016-17ರ ಎ.1ರಿಂದ ಜಾರಿಗೆ ಬರುವಂತೆ ವಸತಿ ಕಟ್ಟಡಗಳಿಗೆ ಶೇ 20 ಮತ್ತು ವಾಣಿಜ್ಯ ಸ್ವತ್ತುಗಳಿಗೆ ಶೇ.25 ರಷ್ಟು ತೆರಿಗೆ ಏರಿಕೆ ಮಾಡಲಾಯಿತು. ತೆರಿಗೆ ನಿಗದಿಗಾಗಿ ಆಸ್ತಿ ಮೌಲ್ಯದ ಲೆಕ್ಕಾಚಾರಕ್ಕೆ ಅನುಗುಣವಾಗಿ ವಲಯ ವರ್ಗೀಕರಣವನ್ನು ಪರಿಷ್ಕರಿಸಲಾಯಿತು. ಅದರ ಪರಿಣಾಮ, ತೆರಿಗೆ ಮೊತ್ತವು 2-3 ಪಟ್ಟು ಜಾಸ್ತಿಯಾಯಿತು. ಹೀಗಾಗಿ, ತೆರಿಗೆ ಹೆಚ್ಚಳಕ್ಕೆ ಸಾರ್ವಜನಿಕರು ಮತ್ತು ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ವಲಯ ವರ್ಗೀಕರಣ ಪರಿಷ್ಕರಣೆ ಕೈಬಿಡಲಾಗಿತ್ತು. ಆ ಬಳಿಕ ತೆರಿಗೆ ಹೆಚ್ಚಳ ಮಾಡಿಲ್ಲ.
ಬಜೆಟ್‍ನಲ್ಲಿ ಘೋಷಿಸಿದ ಯೋಜನೆಗಳಿಗೂ ಹಣ ಇಲ್ಲ!: 2019-20ನೇ ಸಾಲಿನಿಂದಲೇ ಜಾರಿಗೆ ಬರುವಂತೆ ಆಸ್ತಿ ತೆರಿಗೆ ಪರಿಷ್ಕರಣೆ ಕುರಿತು ಆಯುಕ್ತರು 2018ರ ನವೆಂಬರ್ನಲ್ಲಿ ಟಿಪ್ಪಣಿ ಸಿದ್ಧಪಡಿಸಿ, ವಸತಿ ಕಟ್ಟಡಗಳಿಗೆ ಶೇ 20 ಮತ್ತು ವಾಣಿಜ್ಯ ಕಟ್ಟಡಗಳಿಗೆ ಶೇ 30ರಷ್ಟು ತೆರಿಗೆ ಹೆಚ್ಚಿಸುವ ಕುರಿತು ಪ್ರಸ್ತಾಪಿಸಿದ್ದರು. ಆದರೆ, ತೆರಿಗೆ ಪರಿಷ್ಕರಣೆ ಪ್ರಸ್ತಾವಕ್ಕೆ ಕೌನ್ಸಿಲ್ ಸಭೆಯು ಅನುಮೋದನೆ ನೀಡಲಿಲ್ಲ.
ಅಧಿಕ ತೆರಿಗೆ ಸಂಗ್ರಹಕ್ಕೆ ಕಾರ್ಯತಂತ್ರ!: ಪಾಲಿಕೆಯ ಕಂದಾಯ ವಿಭಾಗದ ವಿಶೇಷ ಆಯುಕ್ತರ ನೇತೃತ್ವದ ಸಮಿತಿಯು ಯಾವ ವಿಧಾನದಡಿ ಅಸ್ತಿ ತೆರಿಗೆ ಪರಿಷ್ಕರಣೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿದೆ. ಪ್ರಸ್ತುತ ಪ್ರದೇಶವಾರು ಯೂನಿಟ್ ದರಗಳ ಆಧಾರದಲ್ಲಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಇದರ ಬದಲಿಗೆ ಆಸ್ತಿಯ ಬಂಡವಾಳ ಮೌಲ್ಯ ಇಲ್ಲವೇ ಈಗಿನ ಮಾರ್ಗಸೂಚಿ ದರದ ಆಧಾರದ ಮೇಲೆ ತೆರಿಗೆ ಪರಿಷ್ಕರಣೆ ಮಾಡಲು ಚಿಂತಿಸಲಾಗಿದೆ.
ಅದರ ಜತೆಗೆ ಸ್ವತ್ತುಗಳ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ವಲಯ ವರ್ಗೀಕರಣವನ್ನು ಪರಿಷ್ಕರಿಸಲು ಉದ್ದೇಶಿಸಲಾಗಿದೆ. ಆ ಮೂಲಕ ಹೆಚ್ಚುವರಿಯಾಗಿ 1000 ಕೋಟಿ ರೂ. ತೆರಿಗೆ ವಸೂಲಾಗಬಹುದೆಂದು ನಿರೀಕ್ಷಿಸಲಾಗಿದೆ. ಸ್ವತ್ತುಗಳಲ್ಲಿನ ಕಟ್ಟಡದ ಮೌಲ್ಯ ಮತ್ತು ನಿವೇಶನದ ಮೌಲ್ಯವನ್ನು ಲೆಕ್ಕ ಹಾಕಿ ಶೇ.5ರಷ್ಟು ತೆರಿಗೆ ವಿಧಿಸುವ ಬಗ್ಗೆಯೂ ಚರ್ಚಿಸಲಾಗುತ್ತಿದೆ. ಅದೇ ರೀತಿ ಪ್ರತಿ ವರ್ಷವೂ ತೆರಿಗೆ ಪರಿಷ್ಕರಣೆ ಮಾಡುವುದರಿಂದಾಗುವ ಸಾಧಕ-ಬಾಧಕಗಳ ಕುರಿತಂತೆ ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ವಲಯ ವರ್ಗೀಕರಣವನ್ನು ಜಾರಿಯಲ್ಲಿರುವ ಮಾರ್ಗಸೂಚಿ ದರದನ್ವಯ ಮಾಡಲಾಗುತ್ತದೆ.
ಆಸ್ತಿ ಮಾಲಕರಿಗೆ ತೆರಿಗೆ ಬರೆ: ಕೊರೋನದಿಂದ ಕಂಗಾಲಾಗಿರುವ ಆಸ್ತಿ ಮಾಲಕರಿಗೆ ಇದೀಗ ತೆರಿಗೆ ಭಾರದ ಬರೆ ಎಳೆಯಲು ಪಾಲಿಕೆ ತಯಾರಿ ನಡೆಸುತ್ತಿದೆ. ಇದರಿಂದ ದುಡಿಮೆ ಇಲ್ಲದೆ ಕಂಗೆಟ್ಟಿರುವ ಮಾಲಕರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದಾರೆ. ನಗರದಲ್ಲಿ ಸಾವಿರಾರು ಬಾಡಿಗೆ ಮನೆಗಳು ಖಾಲಿಯಾಗಿವೆ. ಅಂಗಡಿ ಮುಂಗಟ್ಟುಗಳು ಖಾಲಿ ಬಿದ್ದಿವೆ. ತೆರಿಗೆ ಏರಿಕೆಯಿಂದ ವಾಣಿಜ್ಯ ಕಟ್ಟಡಗಳ ಮಾಲಕರಿಗೆ ತೊಂದರೆಯಾಗಲಿದೆ. ಸದ್ಯ 2020-21ರ ಅವಧಿಯಲ್ಲಿ ಅಕ್ಟೋಬರ್ 29ರವರೆಗೆ 2125.47 ಕೋಟಿ ರೂಪಾಯಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ.







