ಏಕತಾ ಪ್ರತಿಮೆ ಬಳಿ ಪ್ರಧಾನಿಯಿಂದ ಆರೋಗ್ಯವನ ಉದ್ಘಾಟನೆ

ಕೆವಾಡಿಯಾ (ಗುಜರಾತ್),ಅ.21: ನರ್ಮದಾ ಜಿಲ್ಲೆಯಲ್ಲಿರುವ ಕೆವಾಡಿಯಾ ಗ್ರಾಮದಲ್ಲಿ ಏಕತಾ ಪ್ರತಿಮೆಯಿರುವ ಸ್ಥಳದ ಸಮೀಪವೇ ಔಷಧೀಯ ಸಸ್ಯಗಳು ಹಾಗೂ ಗಿಡಮೂಲಿಕೆಗಳ ಉದ್ಯಾನವಾದ ‘ಆರೋಗ್ಯವನ’ವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು.
ಸುಮಾರು 17 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಹರಡಿರುವ ಆರೋಗ್ಯವನದಲ್ಲಿ ಮಾನವಕುಲದ ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರ ವಹಿಸುವಂತಹ ವೈವಿಧ್ಯಮಯ ಔಷಧೀಯ ಸಸ್ಯ ಸಂಕುಲಗಳನ್ನು ಕಾಣಬಹುದಾಗಿದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಏಕತಾ ಪ್ರತಿಮೆಯು ಸರ್ದಾರ್ ಪಟೇಲ್ ಅವರ ಬೃಹತ್ ಉಕ್ಕಿನ ಪ್ರತಿಮೆಯಾಗಿದ್ದು ಅದರ ಆಸುಪಾಸಿನ ಪ್ರದೇಶಗಳಲ್ಲಿ ಪ್ರಧಾನಿ ಮೋದಿ ಅವರು ಶುಕ್ರವಾರ ಹಾಗೂ ಶನಿವಾರ 17 ಯೋಜನೆಗಳನ್ನು ಉದ್ಘಾಟಿಸಿದ್ದು, ಅವುಗಳಲ್ಲಿ ಆರೋಗ್ಯವನ ಕೂಡಾ ಒಂದಾಗಿದೆ.
ಆರೋಗ್ಯವನವು ಜನತೆಯ ಬದುಕಿನಲ್ಲಿ ಯೋಗ, ಆಯುರ್ವೇದ ಹಾಗೂ ಧ್ಯಾನದ ಮಹತ್ವವನ್ನು ಪ್ರತಿಪಾದಿಸುತ್ತದೆ. ಈ ವಿಶಾಲವಾದ ಉದ್ಯಾನವನದಲ್ಲಿ 380 ಆಯ್ದ ತಳಿಗಳ 5 ಲಕ್ಷ ಗಿಡಗಳನ್ನು ಬೆಳೆಸಲಾಗಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
ಆರೋಗ್ಯವನವು ತಾವರೆ ಕೊಳ, ಪುಷ್ಪೋದ್ಯಾನ, ಸುಗಂಧವನ,ಯೋಗ ಹಾಗೂ ಧ್ಯಾನವನ, ಒಳಾಂಗಣ ಗಿಡಗಳ ವಿಭಾಗ, ಡಿಜಿಟಲ್ ಮಾಹಿತಿ ಕೇಂದ್ರ, ಸ್ಮರಣಿಕೆಗಳ ಮಳಿಗೆ ಹಾಗೂ ಆಯುರ್ವೇದ ಆಹಾರವನ್ನು ಒದಗಿಸುವ ಕೆಫೆಟೇರಿಯಾವನ್ನು ಒಳಗೊಂಡಿದೆ. ಉದ್ಘಾಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಗಾಲ್ಫ್ ಗಾಡಿಯಲ್ಲಿ ಸುತ್ತಾಡಿದರು ಹಾಗೂ ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ನಿಯೋಜಿತರಾದ ಗೈಡ್‌ಗಳ ಜೊತೆಗೂ ಸಂವಹನ ನಡೆಸಿದರು.







