ತಮಿಳುನಾಡು: ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶೇ. 7.5 ನೀಟ್ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ
ಚೆನ್ನೈ, ಅ. 30: ವೈದ್ಯಕೀಯ ಕೋರ್ಸ್‌ಗಳ ಪ್ರವೇಶದ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್) ಉತ್ತೀರ್ಣರಾದ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಪ್ರವೇಶಾತಿಯಲ್ಲಿ ಶೇ. 7.5 ಮೀಸಲಾತಿ ನೀಡುವ ಮಸೂದೆಗೆ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಶುಕ್ರವಾರ ಅಂಕಿತ ಹಾಕಿದ್ದಾರೆ. ಪ್ರಸಕ್ತ 2020-21ನೇ ಶೈಕ್ಷಣಿಕ ವರ್ಷದಿಂದಲೇ ಮೀಸಲಾತಿ ವ್ಯವಸ್ಥೆ ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಕಾರ್ಯ ನಿರ್ವಹಣಾ ವಿಧಾನ ಅನುಸರಿಸಿದ ಹಾಗೂ ಅದನ್ನು ಸುಗಮಗೊಳಿಸಲು ಆದೇಶ ಹೊರಡಿಸಿದ ಒಂದು ದಿನದ ಬಳಿಕ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿರುವುದನ್ನು ರಾಜ ಭವನ ತಿಳಿಸಿದೆ.
ರಾಜ್ಯಪಾಲರು ಸೆಪ್ಟಂಬರ್ 26ರಂದು ಪತ್ರ ಬರೆದು ಭಾರತದ ಸಾಲಿಸಿಟರ್ ಜನರಲ್ ಅವರ ಕಾನೂನು ಅಭಿಪ್ರಾಯ ಕೇಳಿದ್ದರು. ಅಕ್ಟೋಬರ್ 29ರಂದು ಸಾಲಿಸಿಟರ್ ಜನರಲ್ ಅವರ ಅಭಿಪ್ರಾಯ ಸ್ವೀಕರಿಸಲಾಗಿತ್ತು ಎಂದು ರಾಜಭವನದ ಪತ್ರಿಕಾ ಹೇಳಿಕೆ ತಿಳಿಸಿದೆ. ‘‘ಸಾಲಿಸಿಟರ್ ಜನರಲ್ ಅವರ ಅಭಿಪ್ರಾಯ ಸ್ವೀಕರಿಸಿದ ಕೂಡಲೇ, ಗೌರವಾನ್ವಿತ ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕಿದ್ದಾರೆ’’ ಎಂದು ಹೇಳಿಕೆ ತಿಳಿಸಿದೆ. ಬನ್ವಾರಿಲಾಲ್ ಪುರೋಹಿತ್ ಅವರು ಮಸೂದೆಗೆ ಅಂಕಿತ ಹಾಕಲು ವಿಳಂಬ ಮಾಡುತ್ತಿದ್ದಾರೆ ಎಂದು ಡಿಎಂಕೆ ಸೇರಿದಂತೆ ಪ್ರತಿಪಕ್ಷಗಳು ಆರೋಪಿಸುತ್ತಿರುವ ನಡುವೆ, ಕಾನೂನು ಅಭಿಪ್ರಾಯ ಸ್ವೀಕರಿಸಿದ ಕೂಡಲೇ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿರುವುದು ಮಹತ್ವ ಪಡೆದುಕೊಂಡಿದೆ.







