ಮೆಟ್ರೋ ವಿವಿಧ ಹುದ್ದೆಗಳ ಭರ್ತಿ ನೇಮಕಾತಿ ರದ್ದು

ಬೆಂಗಳೂರು, ಅ.31: ನಮ್ಮ ಮೆಟ್ರೋ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ನಡೆಸುತ್ತಿದ್ದ ನೇಮಕಾತಿ ಪ್ರಕ್ರಿಯೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‍ಸಿಎಲ್) ರದ್ದುಗೊಳಿಸಿದೆ.
ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ 174 ವಿವಿಧ ಹುದ್ದೆಗಳ ನೇಮಕಾತಿಗೆ 2019ರ ಜನವರಿಯಲ್ಲಿ ನಿಗಮವು ಅರ್ಜಿ ಆಹ್ವಾನಿಸಿತ್ತು. ಆಡಳಿತಾತ್ಮಕ ಕಾರಣಗಳಿಂದ ಈ ಪ್ರಕ್ರಿಯೆಯನ್ನು ರದ್ದುಪಡಿಸಲಾಗುತ್ತಿದೆ. ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳಿಗೆ ಶುಲ್ಕ ಹಿಂದಿರುಗಿಸಲಾಗುವುದು. ನಿಗಮದ ವೆಬ್‍ಸೈಟ್ www.bmrc.co.in/career ನಲ್ಲಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕ ನಮೂದಿಸಬೇಕು ಹಾಗೂ ಬ್ಯಾಂಕ್ ಖಾತೆ ವಿವರವನ್ನು ದಾಖಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹುದ್ದೆಗಳ ನೇಮಕಾತಿಗೆ ಫೆಬ್ರವರಿಯಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ್ದ ಈ ಪರೀಕ್ಷೆಯನ್ನು ಸುಮಾರು 40 ಸಾವಿರ ಅಭ್ಯರ್ಥಿಗಳು ಬರೆದಿದ್ದರು. ತದನಂತರ 2019ರ ಮೇನಲ್ಲಿ ಅಂಕಗಳ ಪಟ್ಟಿ ಕೂಡ ಬಿಡುಗಡೆ ಮಾಡಿತ್ತು. ನಂತರ ಪ್ರಕ್ರಿಯೆ ಮುಂದುವರಿದಿರಲಿಲ್ಲ. ಈ ಮಧ್ಯೆ ಕೊರೋನ ನಿಯಂತ್ರಿಸಲು ಲಾಕ್‍ಡೌನ್ ಜಾರಿ ಮಾಡಲಾಯಿತು. ಈಗ ಆಡಳಿತಾತ್ಮಕ ಕಾರಣಗಳನ್ನು ಮುಂದಿಟ್ಟುಕೊಂಡು ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.
ನೇಮಕ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಅಭ್ಯರ್ಥಿಗಳು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಮೊರೆಹೋಗಿದ್ದರು. ಅದಕ್ಕೆ ಸ್ಪಂದಿಸಿದ್ದ ಸಚಿವಾಲಯವು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಎಂಆರ್‍ಸಿಎಲ್‍ಗೆ ಹಲವು ಬಾರಿಗೆ ಸೂಚನೆ ನೀಡಿತ್ತು. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ‘ತಕ್ಷಣ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಬೇಕು‘ ಎಂದು ನಿಗಮಕ್ಕೆ ಪತ್ರ ಬರೆದಿದ್ದರು.







