ಶ್ರೀರಾಮುಲು ಡಿಸಿಎಂ ಆಗಬೇಕು: ಶಾಸಕ ಸೋಮಶೇಖರ ರೆಡ್ಡಿ

ಬಳ್ಳಾರಿ, ಅ.31: ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಡಿಸಿಎಂ ಆಗಬೇಕೆಂಬುದು ಬಹುದಿನಗಳ ಬೇಡಿಕೆ, ಎಲ್ಲರ ಕನಸೂ ಕೂಡ. ಹೀಗಾಗಿ, ಆದಷ್ಟು ಬೇಗ ನನಸಾಗುತ್ತದೆ ಅನ್ನೋದು ನನಗೆ ವಿಶ್ವಾಸ ಇದೆ ಎಂದು ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ವಾಲ್ಮೀಕಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಸೋಮಶೇಖರ್ ರೆಡ್ಡಿ, ಶ್ರೀರಾಮುಲು ಡಿಸಿಎಂ ಆಗಬೇಕೆನ್ನುವ ಕುರಿತು ನಮ್ಮ ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅದು ಬಹುಬೇಗ ಈಡೇರುತ್ತದೆ. ಪರಿಶಿಷ್ಟ ಪಂಗಡದ ಸಮುದಾಯಕ್ಕೆ 7.5% ಮೀಸಲಾತಿ ಕೊಡಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಆದ ನಂತರ ಅದು ಕೂಡ ಜಾರಿಯಾಗುತ್ತದೆ ಎಂಬ ವಿಶ್ವಾಸ ಇದೆ ಎಂದರು.
ಸಿಎಂ ಬದಲಾವಣೆ ಯಾವುದೇ ಕಾರಣಕ್ಕೂ ಆಗುವುದಿಲ್ಲ. ನಮ್ಮ ಸರಕಾರ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಯಡಿಯೂರಪ್ಪ ಸರ್ ಅವರೇ, ಸಿಎಂ ಆಗಿರ್ತಾರೆ. ಎರಡೂ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಜತೆಗೆ ಎಲ್ಲಾ ಎಂಎಲ್ಸಿ ಚುನಾವಣೆಯೂ ನಾವು ಗೆಲ್ಲುತ್ತೇವೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದರು.





