ವಿವಾದಿತ ಕಾರ್ಟೂನ್ಗಳಿಂದ ಜನತೆಗೆ ಆಘಾತವಾಗಿರುವುದನ್ನು ಒಪ್ಪಿಕೊಳ್ಳುತ್ತೇನೆ: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್
ಪ್ಯಾರಿಸ್,ಅ.31: ಪ್ರವಾದಿಯವರ ವಿವಾದಿತ ಕಾರ್ಟೂನ್ಗಳು ಜನತೆಗೆ ಆಘಾತವುಂಟು ಮಾಡಿದೆಯೆಂಬುದು ನನಗೆ ತಿಳಿದಿದೆ. ಆದರೆ, ಆ ಕಾರಣಕ್ಕಾಗಿ ಹಿಂಸೆಯನ್ನು ಸಮರ್ಥಿಸಿ ಕೊಳ್ಳುವುದನ್ನು ನಾನು ಎಂದಿಗೂ ಒಪ್ಪಲಾರೆ’’ ಎಂದು ಫ್ರಾನ್ಸ್ ಅದ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ. ಕತರ್ ಮೂಲದ ಸುದ್ದಿವಾಹಿನಿ ಅಲ್ಜಝೀರಾಗೆ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಅವರು ‘‘ನಮ್ಮ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ’’ ಎಂಬುದಾಗಿ ನಾನು ಪರಿಗಣಿಸುತ್ತೇನೆ ಎಂದರು.
ಪ್ರವಾದಿಯವರ ಕಾರ್ಟೂನ್ಗಳನ್ನು ಶಾಲಾತರಗತಿಯಲ್ಲಿ ಪ್ರದರ್ಶಿಸಿದ ಶಿಕ್ಷಕನೊಬ್ಬನನ್ನು ದುಷ್ಕರ್ಮಿಯೊಬ್ಬ ಹತ್ಯೆಗೈದ ಘಟನೆಯನ್ನು ಖಂಡಿಸಿದ ಸಂದರ್ಭದಲ್ಲಿ ಮ್ಯಾಕ್ರೋನ್ ಅವರು ವ್ಯಂಗ್ಯಚಿತ್ರಗಳು ಅಭಿವ್ಯಕ್ತಿ ಸ್ವಾತಂತ್ರ ಪ್ರತೀಕವಾಗಿವೆ. ವ್ಯಂಗ್ಯಚಿತ್ರಗಳನ್ನು ಬರೆಯುವ ಹಕ್ಕನ್ನು ಫ್ರಾನ್ಸ್ ಎಂದೂ ತ್ಯಜಿಸಲಾರದು ಎಂದು ಹೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಮ್ಯಾಕ್ರೋನ್ ಅವರ ಹೇಳಿಕೆಗೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು.