ಕೋದಂಡರಾಮಸ್ವಾಮಿ ದೇವಾಲಯದಲ್ಲಿ ನಿತ್ಯ ನಡೆಯುತ್ತಿದೆ ಕನ್ನಡದ ಪೂಜೆ
ಕನ್ನಡದ ಮೇಲಿನ ಪ್ರೀತಿ, ಅಭಿಮಾನ ಮೆರೆಯುತ್ತಿರುವ ಹಿರೇಮಗಳೂರು ಕಣ್ಣನ್

ಚಿಕ್ಕಮಗಳೂರು, ಅ.31: ರಾಜ್ಯಾದ್ಯಂತ ಇರುವ ಹಿಂದೂ ದೇವಾಲಯಗಳಲ್ಲಿ ಪ್ರತಿನಿತ್ಯ ನಡೆಯುವ ಪೂಜೆಗಳ ಸಂದರ್ಭ ಅರ್ಚಕರು ಸಂಸ್ಕೃತದ ಶ್ಲೋಕಗಳು, ಮಂತ್ರಗಳನ್ನು ಹೇಳುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಇಂತಹ ಪೂಜೆಗಳ ಸಂದರ್ಭ ಮಂತ್ರ, ಶ್ಲೋಕಗಳನ್ನು ಕನ್ನಡದಲ್ಲಿ ಹೇಳುವ ರಾಜ್ಯದ ಏಕೈಕ ದೇವಾಲಯವೆಂದರೆ ಅದು ಜಿಲ್ಲೆಯಲ್ಲಿರುವ ಹಿರೇಮಗಳೂರು ಕೊಂದಂಡರಾಮಸ್ವಾಮಿ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಪ್ರತಿನಿತ್ಯ ನಡೆಯುವ ದೇವರ ಪೂಜೆ ಸಂದರ್ಭ ಕನ್ನಡದಲ್ಲಿ ಮಂತ್ರಗಳು ಮೊಳಗುತ್ತಿದ್ದು, ದೇವಾಲಯದ ಅರ್ಚಕರಾಗಿರುವ ಹಿರೇಮಗಳೂರು ಕಣ್ಣನ್ ಕನ್ನಡದಲ್ಲಿ ಮಂತ್ರಗಳನ್ನು ಹೇಳುವ ಮೂಲಕ ಕನ್ನಡದ ಮೇಲಿನ ಪ್ರೀತಿ, ಗೌರವ, ಅಭಿಮಾನವನ್ನು ಮೆರೆಯುತ್ತಿದ್ದಾರೆ.
ಚಿಕ್ಕಮಗಳೂರು ನಗರ ಸಮೀಪದ ಹಿರೇಮಗಳೂರು ಬಡಾವಣೆಯಲ್ಲಿರುವ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಪ್ರತೀ ದಿನ ಸಂಸ್ಕೃತ ಮಂತ್ರ, ಶ್ಲೋಕಗಳ ಬದಲಿಗೆ ಕನ್ನಡದಲ್ಲಿಯೇ ವೇದಮಂತ್ರಗಳನ್ನು ಮೊಳಗಿಸುವ ಮೂಲಕ ಈ ದೇವಾಲಯವನ್ನು ರಾಜ್ಯದ ಆಕರ್ಷಣೆಯ ಕೇಂದ್ರವನ್ನಾಗಿಸಿದ ಕೀರ್ತಿ ವಾಗ್ಮಿ, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರಿಗೆ ಸಲ್ಲುತ್ತಿದ್ದು, ಕನ್ನಡದಲ್ಲಿಯೇ ದೇವರನ್ನು ಪೂಜಿಸುವ ಮೂಲಕ ಕನ್ನಡವನ್ನು ಕಟ್ಟಿ ಬೆಳೆಸುವ ಕಾಯಕವನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ಕನ್ನಡ ಪೂಜಾರಿ ಎಂದೇ ರಾಜ್ಯಾದ್ಯಂತ ಖ್ಯಾತಿಪಡೆದಿರುವ ಹಿರೇಮಗಳೂರು ಕಣ್ಣನ್ ಅವರು ಹಿರೇಮಗಳೂರು ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಕನ್ನಡದಲ್ಲೇ ಪೂಜೆ ಸಲ್ಲಿಸುವ ಕಾರಣಕ್ಕೆ ರಾಜ್ಯದಾದ್ಯಂತ ಮನೆಮಾತಾಗಿದ್ದಾರೆ. ತಮ್ಮ ಅರ್ಚಕ ವೃತ್ತಿಯನ್ನು ವೈಶಿಷ್ಟ್ಯಪೂರ್ಣವಾಗಿ ನಿಭಾಯಿಸುತ್ತಿರುವುದರೊಂದಿಗೆ ಕನ್ನಡ ಭಾಷೆಯ ಮಹತ್ವ, ವೈಶಿಷ್ಟ್ಯತೆಯನ್ನು ಸಾರುತ್ತಾ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುತ್ತಿರುವುದು ಅವರಿಗೆ ಕನ್ನಡ ಭಾಷೆಯ ಮೇಲಿರುವ ಅಭಿಮಾನಕ್ಕಿರುವ ಸಾಕ್ಷಿಯಾಗಿದೆ.
ಅಲ್ಲದೇ ಹಿರೇಮಗಳೂರು ದೇವಾಲಯದ ಆವರಣವನ್ನು ಸಂಪೂರ್ಣವಾಗಿ ಕನ್ನಡಮಯವಾಗಿಸಿದ್ದು, ದೇವಾಲಯದ ಆವರಣ, ಪ್ರಾಂಗಣದ ಸುತ್ತಲು ಕನ್ನಡದ ನುಡಿಗಟ್ಟುಗಳು, ಒಗಟುಗಳು, ಭಾಷೆಯ ಮಹತ್ವ ಸಾರುವ ಹಾಸ್ಯ ಮಿಶ್ರಿತ ಬರಹಗಳ ಸಾಲುಗಳು ಕಣ್ಣಿಗೆ ರಾಚುತ್ತವೆ. ಇನ್ನು ದೇವಾಲಯಕ್ಕೆ ಬರುವ ಭಕ್ತರಲ್ಲಿ ಮಾತೃಭಾಷೆಯ ಪ್ರೇಮ ಬೆಳೆಸುವ ಪ್ರಯತ್ನವನ್ನು ಸದಾ ಮಾಡುವ ಅವರು, ದೇವಾಲಯಕ್ಕೆ ಬರುವವರಲ್ಲಿ ಕನ್ನಡ ಭಾಷೆಯ ಮಹತ್ವ, ಭಾಷೆಯ ಸತ್ವ, ಸಾರ, ಪ್ರಸಿದ್ಧ ಕವಿಗಳು ಬರೆದಿರುವ ಕೃತಿ, ಅದರಲ್ಲಿರುವ ಜೀವನ ಸಂದೇಶವನ್ನು ಹಾಸ್ಯ ಮಿಶ್ರಿತವಾಗಿ ತಮ್ಮದೇ ನುಡಿಗಟ್ಟುಗಳ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಪೂಜೆಯ ವೇಳೆ ಮಂತ್ರವನ್ನು ಕನ್ನಡದಲ್ಲೇ ಹೇಳುವ ಮೂಲಕ ಭಕ್ತರನ್ನು ಬೆರಗುಗೊಳಿಸುತ್ತಿದ್ದಾರೆ. ಈ ಮೂಲಕ ಇಳಿ ವಯಸ್ಸಿನಲ್ಲೂ ಅವರು ಕನ್ನಡ ಕಟ್ಟಿ ಬೆಳೆಸುತ್ತಿದ್ದಾರೆ. ಈ ಕಾರಣಕ್ಕೆ ಹಿರೇಮಗಳೂರು ಕಣ್ಣನ್ ಕನ್ನಡ ಪೂಜಾರಿಯಾಗಿ ನಾಡಿನಾದ್ಯಂತ ಮನೆಮಾತಾಗುತ್ತಿದ್ದಾರೆ.
'ಸರಕಾರ ತರಬೇತಿ ಕೇಂದ್ರ ಆರಂಭಿಸಬೇಕು'
ಹಿರೇಮಗಳೂರು ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಪ್ರತೀನಿತ್ಯ ಕನ್ನಡದಲ್ಲೇ ಪೂಜೆ ಸಲ್ಲಿಸುತ್ತಿದ್ದೇನೆ. ರಾಜ್ಯದ ಪ್ರತೀ ದೇವಾಲಯಗಳಲ್ಲೂ ಕನ್ನಡದಲ್ಲೇ ಪೂಜೆ ಸಲ್ಲಿಸುವುದರೊಂದಿಗೆ ಕನ್ನಡವನ್ನು ಕಟ್ಟಿಬೆಳೆಸುವ ಕೆಲಸಕ್ಕೆ ಸರಕಾರ ಮುಂದಾಗಬೇಕು. ಕನ್ನಡದಲ್ಲಿ ಪೂಜೆ ಮಾಡುವುದನ್ನು ಕಲಿಯಬೇಕೆಂದು ಆಸಕ್ತಿ ಹೊಂದಿರುವರಿಗೆ ಹಿರೇಮಗಳೂರು ಕೋದಂಡರಾಮಸ್ವಾನಿ ದೇವಸ್ಥಾನದಲ್ಲಿ ಕನ್ನಡ ಪೂಜೆಯ ಟ್ರೈನಿಂಗ್ ಸೆಂಟರ್ ತೆರೆಯುವ ಚಿಂತನೆ ಸರಕಾರ ಮಾಡಿದರೆ ಅದಕ್ಕೆ ನನ್ನ ಸಹಕಾರ ಇದ್ದೇ ಇದೆ.
- ಹಿರೇಮಗಳೂರು ಕಣ್ಣನ್ಸರಕಾರ ನಡೆಸುವ ರಾಜ್ಯೋತ್ಸವ ಕಾರ್ಯಕ್ರಮ ಕೇವಲ ನಗರಕ್ಕೆ ಸೀಮಿತವಾಗಬಾರದು. ಅದು ಹಳ್ಳಿ ಹಳ್ಳಿಗಳಲ್ಲೂ ಹಬ್ಬದಂತೆ ಆಚರಣೆಯಾಗಬೇಕು. ಪ್ರತೀ ಜಿಲ್ಲೆಯಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಭಾಷಾ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ಜಿಲ್ಲಾ ದರ್ಶನದ ಮೂಲಕ ಕನ್ನಡ ನಾಡಿನ ಕವಿಗಳು, ಅವರು ರಚಿಸಿದ ಕವಿತೆಗಳು, ಕೃತಿಗಳು ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಮಾಡಬೇಕು. ಶ್ರೇಷ್ಠ ಕವಿಗಳು ರಚಿಸಿದ ಕೃತಿಗಳನ್ನು ಸಿಡಿ, ಕೈಪಿಡಿಗಳನ್ನು ಮಕ್ಕಳಿಗೆ ನೀಡುವುದರಿಂದ ಕನ್ನಡದ ಪರಂಪರೆ, ಸಂಸ್ಕೃತಿ, ಭಾಷೆಯ ಉಳಿವು ಸಾಧ್ಯವಾಗಲಿದೆ.
- ಹಿರೇಮಗಳೂರು ಕಣ್ಣನ್
.jpg)







