ಕನ್ನಡತನದ ಎದುರಿನ ಹೊಸ ಹೊಸ ಸವಾಲುಗಳು...

ಕನ್ನಡ ಅಸ್ಮಿತೆಯ ಮೇಲೆ ಪದೇಪದೇ ದಾಳಿ ನಡೆಸುತ್ತಿರುವುದು ರಾಜಕೀಯ ಶಕ್ತಿ ಮತ್ತು ಸಿದ್ಧಾಂತಗಳು. ಹೀಗಾಗಿ ನಾವು ಇದನ್ನು ರಾಜಕೀಯವಾಗಿಯೇ ಎದುರಿಸಿ ನಿಲ್ಲಬೇಕಿದೆ, ಗೆಲ್ಲಬೇಕಿದೆ. ಕನ್ನಡಿಗರು ತಮ್ಮೆದುರಿನ ಸಮಸ್ಯೆಗಳಿಗೆ ರಾಜಕೀಯ ಪರಿಹಾರಗಳನ್ನೇ ಹುಡುಕಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯೋತ್ಸವದಂತಹ ಆಚರಣೆಗಳಿಗೆ ಯಾವ ಅರ್ಥವೂ ಇರುವುದಿಲ್ಲ.
ಮತ್ತೊಂದು ಕನ್ನಡ ರಾಜ್ಯೋತ್ಸವ ಬಂದಿದೆ. ಮತ್ತೆ ಮತ್ತೆ ಕನ್ನಡ ಅಸ್ಮಿತೆ, ಕನ್ನಡಿಗರ ಸಮಸ್ಯೆಗಳ ಕುರಿತು ಚರ್ಚಿಸುತ್ತಿದ್ದೇವೆ. ಆದರೆ ನಮ್ಮ ಸಮಸ್ಯೆಗಳು ನಮ್ಮ ಊಹೆಗೆ ಮೀರಿ ಬೆಳೆಯುತ್ತಲೇ ಇವೆ. ಇವತ್ತಿನ ಕಾಲಘಟ್ಟದಲ್ಲಿ ಕನ್ನಡದ ಸಮಸ್ಯೆಗಳು ಎಂದರೆ ಕನ್ನಡಿಗರ ಸಮಸ್ಯೆಗಳು. ಕನ್ನಡಿಗರ ಬದುಕಿನ ಸಮಸ್ಯೆಗಳು. ಅದಕ್ಕೆ ಹೊಸಹೊಸ ಆಯಾಮಗಳು ಸೇರ್ಪಡೆಯಾಗುತ್ತಲೇ ಇವೆ.
ಕೆಲವು ವರ್ಷಗಳ ಕೆಳಗೆ ಇಂಗ್ಲಿಷ್ ಒಂದೇ ಕನ್ನಡಕ್ಕೆ ಇರುವ ದೊಡ್ಡ ಆತಂಕ ಎಂದು ಭಾವಿಸಿದ್ದೆವು. ಇಂಗ್ಲಿಷ್‌ಗೆ ಹೇಗೋ ಒಗ್ಗಿಕೊಳ್ಳುವುದರಷ್ಟರಲ್ಲಿ ಹಿಂದಿ ಕನ್ನಡತನವನ್ನು ಬುಡಮೇಲು ಮಾಡುತ್ತಿದೆ. ಇಂಗ್ಲಿಷನ್ನು ನಾವು ಜಾಗತಿಕ ಭಾಷೆ ಎಂಬ ಕಾರಣಕ್ಕೆ, ತಾಂತ್ರಿಕ ಕಾರಣಗಳಿಗೆ ಬಳಸಿಕೊಂಡೆವು. ಆದರೆ ಈ ಯಾವ ಆಯಾಮಗಳು ಇಲ್ಲದ ಹಿಂದಿಯನ್ನು ರಾಷ್ಟ್ರವಾದದ ಹೆಸರಲ್ಲಿ ಹೇರಲಾಯಿತು. ಅದು ಕನ್ನಡತನವನ್ನು ಹಂತಹಂತವಾಗಿ ಕೊಲ್ಲುವ ಕೆಲಸ ಮಾಡುತ್ತಿದೆ. ಇಂಗ್ಲಿಷಿನಿಂದ ನಾವು ಅರ್ಧ ಕನ್ನಡತನವನ್ನು ಕಳೆದುಕೊಂಡೆವು, ಈಗ ಹಿಂದಿ ಸರ್ವನಾಶಕ್ಕೆ ಕಾದುಕುಳಿತಿದೆ. ಇನ್ನೆರಡು ದಶಕಗಳಲ್ಲಿ, ಅಥವಾ ಅದಕ್ಕೂ ಮುನ್ನ ಹಿಂದಿ ಎಲ್ಲ ರಾಜ್ಯಗಳ ಅಧಿಕೃತ ಆಡಳಿತ ಭಾಷೆಯಾದರೆ ಆಶ್ಚರ್ಯವಿಲ್ಲ. ಭಾರತದ ಭಾಷಾವೈವಿಧ್ಯದ ಸರ್ವನಾಶಕ್ಕೆಂದು ಹೊಡೆಯಲಾಗುವ ಕೊನೆಯ ಮೊಳೆ ಅದೇ ಆಗಿರಬಹುದು.
ಕಳೆದ ವರ್ಷ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘‘ಒಂದು ದೇಶಕ್ಕೆ ಒಂದು ಭಾಷೆಯಿರಬೇಕು, ಅದು ಹಿಂದಿಯೇ ಆಗಿರಬೇಕು’’ ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ದಕ್ಷಿಣದ ರಾಜ್ಯಗಳಿಂದ ಪ್ರತಿರೋಧವೂ ವ್ಯಕ್ತವಾಯಿತು. ಆದರೆ ದೇಶವನ್ನು ಆಳುವ ಪಕ್ಷ, ಆಳುವವರ ಸಿದ್ಧಾಂತ-ಗುರಿ ಏನೆಂಬುದು ಈ ಹೇಳಿಕೆಯಿಂದ ಸ್ಪಷ್ಟವಾಯಿತು. ಅವರಿಗೆ ಬಹುತ್ವ ಭಾರತ ಬೇಕಾಗಿಲ್ಲ. ಒಂದು ದೇಶ ಒಂದು ಧರ್ಮ, ಒಂದು ದೇಶ ಒಂದು ಸಂಸ್ಕೃತಿ, ಒಂದು ದೇಶ ಒಂದು ಭಾಷೆ ಎಂಬುದು ಅಪಾಯಕಾರಿ ಚಿಂತನೆ. ಇದನ್ನು ರಾಷ್ಟ್ರವಾದದ ಹೆಸರಲ್ಲಿ ಎಷ್ಟೇ ಸಮರ್ಥಿಸಿಕೊಂಡರೂ, ಅದು ರಾಷ್ಟ್ರವಿರೋಧಿ ಚಿಂತನೆ. ಕೇಂದ್ರದ ಬಿಜೆಪಿ ಸರಕಾರದ ನೀತಿಗಳು ದೇಶವನ್ನು ಒಂದುಗೂಡಿಸುವ ಬದಲು ಛಿದ್ರಛಿದ್ರಗೊಳಿಸುವ ಹಾಗೆ ಕಾಣುತ್ತಿದೆ. ಭಾರತದ ಸೌಂದರ್ಯವೇ ಇಲ್ಲಿನ ಬಹುತ್ವ. ನಾನಾ ಭಾಷೆ, ಸಂಸ್ಕೃತಿ, ಆಚಾರ ವಿಚಾರ, ಮತ ಧರ್ಮ ಪಂಥಗಳು ಇಲ್ಲಿ ಬೆಳೆದುಬಂದಿವೆ. ಈ ವಿಭಿನ್ನತೆಗಳ ಜತೆಯೇ ನಾವು ಒಂದಾಗಬೇಕಿದೆ. ಭಾರತವೆಂಬುದು ದೇಶವಲ್ಲ, ಒಕ್ಕೂಟ. ಇಲ್ಲಿ ಎಲ್ಲರ ಪ್ರಾತಿನಿಧ್ಯವೂ ಮುಖ್ಯ. ಇಷ್ಟೆಲ್ಲ ಬಹುಮುಖಿ ಚಲನೆಗಳ ಜತೆಯೇ ಭಾರತ ಬೆಳೆದಿದೆ, ಮುಂದೆಯೂ ಬೆಳೆಯಬೇಕು. ಹಾಗಾದಾಗ ಮಾತ್ರ ನಾವು ಒಂದು ಭಾರತವಾಗಿ ಇರಲು ಸಾಧ್ಯ. ಆದರೆ ಆಳುವ ವರ್ಗಕ್ಕೆ ತನ್ನದೇ ಆದ ಹಿತಾಸಕ್ತಿಗಳಿವೆ. ಅದು ತನ್ನ ಅನುಕೂಲಕ್ಕಾಗಿ ಪ್ರಾದೇಶಿಕ ಅಸ್ಮಿತೆಗಳನ್ನು ನಾಶಪಡಿಸುವ ಕಾರ್ಯವನ್ನು ಮೊದಲಿನಿಂದಲೂ ಮಾಡುತ್ತ ಬಂದಿದೆ. ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ಕಾರ್ಯ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಯಾಕೆಂದರೆ ಆ ಪಕ್ಷದ ಮಾತೃ ಸಂಘಟನೆ ಆರೆಸ್ಸೆಸ್ ಕೂಡ ಏಕತ್ವದಲ್ಲಿ ನಂಬಿಕೆ ಹೊಂದಿದೆ. ಅದು ಎಲ್ಲವನ್ನೂ ‘ಒಂದು’ ಮಾಡಲು ನೋಡುತ್ತದೆ. ಅದರ ಅರ್ಥ, ಹಲವನ್ನು ನಾಶಪಡಿಸಿ, ಒಂದನ್ನು ಮುಂದೆ ತರುವುದು ಎಂದರ್ಥ. ಇದು ವಿನಾಶಕಾರಿ ಪ್ರಯೋಗ. ಇಂತಹ ಪ್ರಯೋಗಗಳನ್ನು ನಡೆಸಿದ ಹಲವು ದೇಶಗಳು ಪತನಗೊಂಡಿವೆ. ಸೋವಿಯತ್ ಒಕ್ಕೂಟ ಪತನ ಇದಕ್ಕೆ ಸ್ಪಷ್ಟ ನಿದರ್ಶನ. ಅದು ಒಡೆದು ಚೂರಾಗಲು ರಶ್ಯನ್ ಭಾಷೆಯನ್ನು ಹೇರಲು ಪ್ರಯತ್ನಿಸಿದ್ದು ಕೂಡ ಒಂದು ಕಾರಣ. ಪಾಕಿಸ್ತಾನ ಒಡೆದು ಹೋಳಾಗಲೂ ಕೂಡ ಇದೇ ಕಾರಣ. ಬಾಂಗ್ಲಾದೇಶದ ಬಂಗಾಳಿಗಳ ಮೇಲೆ ಉರ್ದು ಹೇರಲು ಯತ್ನಿಸಿದ್ದರಿಂದಲೇ ಅಲ್ಲಿ ದಂಗೆ ಆರಂಭಗೊಂಡು, ದೇಶ ವಿಭಜನೆಯ ಹಂತ ತಲುಪಿತು.
ಬಹುತ್ವವನ್ನು ಹೊಸಕಿಹಾಕಲು ಯತ್ನಿಸುವ ಶಕ್ತಿಗಳು ಸದಾ ಕ್ರಿಯಾಶೀಲವಾಗಿರುತ್ತವೆ. ಅಧಿಕಾರದ ಅವಕಾಶ ಸಿಕ್ಕಾಗ ಅವು ವಿಜೃಂಭಿಸುತ್ತವೆ. ಭಾರತದಲ್ಲಿ ಈಗ ನಡೆಯುತ್ತಿರುವುದೂ ಅದೇ. ಭಾರತ ಒಂದು ಒಕ್ಕೂಟ ರಾಷ್ಟ್ರವಾಗಿ ಎಲ್ಲ ರಾಜ್ಯಗಳೂ ತಮ್ಮದೇ ಆದ ಹಕ್ಕು, ಅವಕಾಶಗಳನ್ನು ಹೊಂದಿದ್ದವು. ಆದರೆ ಕೇಂದ್ರೀಕೃತ ಆಡಳಿತದ ಹುಚ್ಚು ತಲೆಗೇರಿದ ಮೇಲೆ ರಾಜ್ಯ ಪಟ್ಟಿಯಲ್ಲಿದ್ದ ವಿಷಯಗಳು ನಿಧಾನವಾಗಿ ಕೇಂದ್ರ ಪಟ್ಟಿಗೆ ಅಥವಾ ಸಮವರ್ತಿ ಪಟ್ಟಿಗೆ ಜಾರುತ್ತಿವೆ. ಜಿಎಸ್‌ಟಿ ಹೆಸರಿನಲ್ಲಿ ರಾಜ್ಯ ಸರಕಾರಗಳು ಸ್ವತಂತ್ರವಾಗಿ ತೆರಿಗೆ ವಿಧಿಸುವ ಅವಕಾಶಗಳನ್ನು ಕಳೆದುಕೊಂಡಿವೆ. ಶಿಕ್ಷಣ ಕೂಡ ನಿಧಾನವಾಗಿ ಕೇಂದ್ರ ಸರಕಾರದ ಅಂಕೆಗೆ ಸಿಲುಕಿದೆ. ನೀಟ್ ಇದಕ್ಕೆ ದೊಡ್ಡ ಉದಾಹರಣೆ. ರಾಜ್ಯ ಸರಕಾರಗಳ ಪಠ್ಯಕ್ರಮಗಳು ಪ್ರಸ್ತುತತೆಯನ್ನು ಕಳೆದುಕೊಂಡು ಕೇಂದ್ರೀಯ ಪಠ್ಯವೇ ಮೇಲುಗೈ ಸಾಧಿಸಿದೆ. ರಾಜ್ಯ ಸರಕಾರಗಳ ಕೈಯಲ್ಲಿ ಅಧಿಕಾರವಿರುವ ವಿಷಯಗಳಲ್ಲೂ ಕೇಂದ್ರ ಮೂಗುದಾರ ಇಟ್ಟುಕೊಂಡು ಆಟವಾಡಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರಕಾರಗಳು ಯಕಶ್ಚಿತ್ ಗ್ರಾಮಪಂಚಾಯತ್‌ಗಳ ಹಾಗೆ ಕಾರ್ಯನಿರ್ವಹಿಸಬೇಕಾಗುತ್ತದೆ, ಯಾಕೆಂದರೆ ಎಲ್ಲವನ್ನೂ ದಿಲ್ಲಿಯೇ ನಿರ್ವಹಿಸಲಿದೆ. ದೇಶಕ್ಕೊಂದೇ ಸರಕಾರ, ದೇಶಕ್ಕೊಬ್ಬನೇ ದೊರೆ. ರಾಜಶಾಹಿ ವ್ಯವಸ್ಥೆಯ ಪುನರುತ್ಥಾನದಂತೆ ಇದೆಲ್ಲವೂ ಕಾಣಿಸುತ್ತಿದೆ.
ಕರ್ನಾಟಕ ಬಹಳ ಹಿಂದೆಯೇ ವಿಕೇಂದ್ರೀಕರಣದ ಕನಸು ಕಂಡ ರಾಜ್ಯ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ದೇಶಕ್ಕೆ ಮಾದರಿಯಾದ ರಾಜ್ಯ. ಅಧಿಕಾರ ಬೆಂಗಳೂರಿನಂತಹ ನಗರದಲ್ಲಿ ಕೇಂದ್ರೀಕೃತವಾಗಬಾರದು, ಅದು ಹಳ್ಳಿಹಳ್ಳಿಗೆ ತಲುಪಬೇಕು ಎಂಬುದು ನಾವು ಒಡ್ಡಿಕೊಂಡ ವಿಕೇಂದ್ರೀಕರಣದ ಆಶಯವಾಗಿತ್ತು. ಆದರೆ ದೇಶದ ಮಟ್ಟದಲ್ಲಿ ಇಂತಹ ವಿಕೇಂದ್ರೀಕರಣದ ಕತ್ತು ಕತ್ತರಿಸಿ, ರಾಜ್ಯಗಳ ರೆಕ್ಕೆಪುಕ್ಕ ಕತ್ತರಿಸಲಾಗುತ್ತಿದೆ. ಎಲ್ಲವನ್ನೂ ಕೇಂದ್ರ ಸರಕಾರವೇ ಇಟ್ಟುಕೊಳ್ಳುವುದಾದರೆ ರಾಜ್ಯಗಳ ಅಸ್ತಿತ್ವಕ್ಕೆ ಅರ್ಥವೇನು? ರಾಜ್ಯಗಳಿಗೆ ಸ್ವಾಯತ್ತತೆ ಕೊಡಿ ಎಂದು ಹಿಂದೆ ಜಯಲಲಿತಾ, ಕರುಣಾನಿಧಿಯಂತಹ ನಾಯಕರು ದಕ್ಷಿಣದಿಂದ ಆಗಾಗ ಗುಟುರು ಹಾಕುತ್ತಿದ್ದರು. ಈಗ ತಮಿಳುನಾಡು ಹಿಂದೆ ಇದ್ದ ಶಕ್ತಿಯನ್ನು ಕಳೆದುಕೊಂಡಿದೆ. ಹಿಂದಿಹೇರಿಕೆಯಂತಹ ವಿಷಯದಲ್ಲಿ ಕರ್ನಾಟಕದಲ್ಲಿ ಎದುರಾಗುವಷ್ಟೂ ಪ್ರತಿರೋಧ ಈಗ ತಮಿಳುನಾಡಿನಿಂದ ಹೊರಡುತ್ತಿಲ್ಲ. ತಮಿಳುನಾಡು ಮಾತ್ರವಲ್ಲ, ದೇಶದ ಇತರ ಭಾಗಗಳಲ್ಲೂ ಪ್ರಾದೇಶಿಕ ಪಕ್ಷಗಳು ಮೊದಲಿನಷ್ಟು ಶಕ್ತಿಯುತವಾಗಿಲ್ಲ.
ಕರ್ನಾಟಕ ಹಿಂದಿ ಪ್ರಭುತ್ವಕ್ಕೆ ಒಂದು ಪ್ರಯೋಗಶಾಲೆಯಾಗಿ ಹೋಗಿದೆ. ಕೇಂದ್ರ ಸರಕಾರದ ಇಲಾಖೆಗಳ ಎಲ್ಲ ವ್ಯವಹಾರಗಳೂ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪ್ರಧಾನವಾಗಿ ನಡೆಯುತ್ತ ಕನ್ನಡ ಕಣ್ಮರೆಯಾಗುತ್ತಿದೆ. ಕನ್ನಡದಲ್ಲಿ ಬರೆದ ಚೆಕ್‌ಗಳನ್ನು ಬ್ಯಾಂಕುಗಳು ಮಾನ್ಯ ಮಾಡುತ್ತಿಲ್ಲ. ರೈಲ್ವೆ ಟಿಕೆಟಿನಲ್ಲಿ ಕನ್ನಡದ ಜಾಗವನ್ನು ಹಿಂದಿ ತುಂಬಿಕೊಂಡಿದೆ. ಐಬಿಪಿಎಸ್‌ನಂತಹ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವಂತಿಲ್ಲ. ಗ್ರಾಮೀಣ ಬ್ಯಾಂಕುಗಳಲ್ಲೂ ಕನ್ನಡಿಗರಿಗೆ ಉದ್ಯೋಗ ಲಭಿಸುತ್ತಿಲ್ಲ. ಹಳ್ಳಿಗಳಿಗೆ ಬಂದ ಕನ್ನಡ ಗೊತ್ತಿಲ್ಲದ ಬ್ಯಾಂಕ್ ಅಧಿಕಾರಿ, ನೌಕರರು ಹಿಂದಿಯಲ್ಲೇ ಹಳ್ಳಿ ಜನರೊಂದಿಗೆ ವ್ಯವಹರಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೂರನೇ ಭಾಷೆಯಾಗಿಯೂ ಕನ್ನಡ ಉಳಿಯುತ್ತಿಲ್ಲ. ಈಗೀಗ ರಾಜ್ಯ ಹೆದ್ದಾರಿಗಳಲ್ಲೂ ಹಿಂದಿ ಕಾಣಿಸಿಕೊಳ್ಳುತ್ತಿದೆ. ಕೇಂದ್ರ ಸರಕಾರ ತನ್ನ ಆಡಳಿತ ಭಾಷೆಯನ್ನಾಗಿ ಹಿಂದಿಯೊಂದನ್ನೇ ಇಟ್ಟುಕೊಳ್ಳುವ ಗುರಿ ಹೊಂದಿರುವುದರಿಂದ ಅದು ಇಂಗ್ಲಿಷನ್ನೂ ಹಂತಹಂತವಾಗಿ ಕೈಬಿಡುತ್ತ ಬರುತ್ತಿದೆ. ಈ ಕುತಂತ್ರ ಫಲಿಸಿದ ದಿನ ಇಂಡಿಯಾ, ಹಿಂದಿಯಾ ಆಗಿ ಬದಲಾಗಿರುತ್ತದೆ. ಪರಿಪೂರ್ಣ ಭಾರತೀಯರಾಗಲು ಹಿಂದಿ ಭಾಷಿಗರಾಗಿರಬೇಕು ಅಥವಾ ಹಿಂದಿ ಭಾಷೆಯಲ್ಲಿ ಪ್ರೌಢಿಮೆ ಹೊಂದಿರಬೇಕು ಎಂಬ ಹಂತಕ್ಕೆ ಈ ತಂತ್ರವನ್ನು ರೂಪಿಸಲಾಗಿದೆ. ಈಗಾಗಲೇ ಹಿಂದಿಯೇತರ ಭಾಷಿಗರನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಎರಡನೇ ದರ್ಜೆ ಪ್ರಜೆಗಳಂತೆ ನೋಡಲಾಗುತ್ತಿದೆ. ಅಮಿತ್ ಶಾ ಹೇಳಿದ ಒಂದು ದೇಶ-ಒಂದು ಭಾಷೆ ಎಂಬ ನೀತಿಯ ಪರಿಣಾಮಗಳು ಇವು.
ಕೇಂದ್ರ ಸರಕಾರ ತಾನು ಅಂದುಕೊಂಡಿದ್ದನ್ನು ಸಾಧಿಸಲು ಏನನ್ನು ಬೇಕಾದರೂ ಮಾಡುತ್ತದೆ. ನ್ಯಾಯಾಲಯಗಳು ಹೇಳಿದರೂ ಅದು ದಾಖಲೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನೀಡುತ್ತಿಲ್ಲ. ಭಾಷೆ ಮಾತ್ರವಲ್ಲ, ಅದು ಪ್ರಾದೇಶಿಕ ಅಸ್ಮಿತೆಗಳನ್ನು ನಾಶಪಡಿಸಲು ಎಂತಹ ಅಪಾಯಕಾರಿ ಸಾಹಸಗಳಿಗೂ ಕೈ ಹಾಕಬಹುದು. ರಾಜ್ಯಗಳ ಪುನರ್ ವಿಂಗಡಣೆ, ಕೇಂದ್ರಾಡಳಿತ ಪ್ರದೇಶಗಳ ರಚನೆಯಂತಹ ದುಸ್ಸಾಹಸಗಳ ಹತಾರವೂ ಅದರ ಬಳಿ ಇದೆ. ಒಡೆದು ಆಳುವ ನೀತಿ ಬ್ರಿಟಿಷರ ಆಯುಧವಾಗಿತ್ತು, ಈಗ ಹಿಂದಿ ಸಾಮ್ರಾಜ್ಯಶಾಹಿಯೂ ಅದನ್ನೇ ಮಾಡುತ್ತಿದೆ.
ಇದನ್ನೆಲ್ಲ ವಿರೋಧಿಸಬೇಕಿದ್ದ ನಮ್ಮ ಜನಪ್ರತಿನಿಧಿಗಳು ದಿಲ್ಲಿ ಗುಲಾಮರಾಗಿದ್ದಾರೆ. ಕಳೆದ ವರ್ಷ ಬಹಳಷ್ಟು ಮಂತ್ರಿಗಳು, ನವೆಂಬರ್ ಒಂದರಂದು ಕನ್ನಡ ಬಾವುಟವನ್ನು ಹಾರಿಸದೆ, ರಾಷ್ಟ್ರ ಧ್ವಜ ಹಾರಿಸಿದರು. ಇದು ಕೇವಲ ಅಭಿಮಾನ ಶೂನ್ಯತೆಯಲ್ಲ, ದಿಲ್ಲಿಯ ಗುಲಾಮಗಿರಿ. ಅಧಿಕಾರಕ್ಕಾಗಿ ತನ್ನತನವನ್ನು ಮಾರಿಕೊಂಡವರ ರೂಪ. ಕನ್ನಡದ ಜಗತ್ತು ಇದೆಲ್ಲ ಪ್ರತಿಕೂಲ ಸನ್ನಿವೇಶಗಳ ವಿರುದ್ಧ ಹೋರಾಡಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ತಮ್ಮ ಧ್ವನಿಯನ್ನು ತಕ್ಕಮಟ್ಟಿಗೆ ಯಶಸ್ವಿಯಾಗಿ ಆಳುವ ಜನರ ಕಿವಿಗಳಿಗೆ ಕೇಳಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಅದು ಸಾಕಾಗುತ್ತಿಲ್ಲ. ಕನ್ನಡ ಅಸ್ಮಿತೆಯ ಮೇಲೆ ಪದೇಪದೇ ದಾಳಿ ನಡೆಸುತ್ತಿರುವುದು ರಾಜಕೀಯ ಶಕ್ತಿ ಮತ್ತು ಸಿದ್ಧಾಂತಗಳು. ಹೀಗಾಗಿ ನಾವು ಇದನ್ನು ರಾಜಕೀಯವಾಗಿಯೇ ಎದುರಿಸಿ ನಿಲ್ಲಬೇಕಿದೆ, ಗೆಲ್ಲಬೇಕಿದೆ. ಕನ್ನಡಿಗರು ತಮ್ಮೆದುರಿನ ಸಮಸ್ಯೆಗಳಿಗೆ ರಾಜಕೀಯ ಪರಿಹಾರಗಳನ್ನೇ ಹುಡುಕಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯೋತ್ಸವದಂತಹ ಆಚರಣೆಗಳಿಗೆ ಯಾವ ಅರ್ಥವೂ ಇರುವುದಿಲ್ಲ.







