ಅಕ್ಟೋಬರ್‌ನಲ್ಲಿ ಶೇಕಡ 30 ಇಳಿಕೆ ಕಂಡ ಕೊರೋನ ಸೋಂಕು

ಹೊಸದಿಲ್ಲಿ, ನ.1: ದೇಶದಲ್ಲಿ ಕಳೆದ ಮಾರ್ಚ್‌ನಲ್ಲಿ ಮಾರಕ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮಾಸಿಕ ಸರಾಸರಿ ಇಳಿಕೆಯಾಗಿದೆ. ಸೆಪ್ಟಂಬರ್ ತಿಂಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಹೊಸದಾಗಿ ಸೇರ್ಪಡೆಯಾದ ಪ್ರಕರಣಗಳ ಸಂಖ್ಯೆ ಶೇಕಡ 30ರಷ್ಟು ಕಡಿಮೆಯಾಗಿದೆ. ಅಂತೆಯೇ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಕೂಡಾ ಇದೇ ಪ್ರಮಾಣದಲ್ಲಿ ಇಳಿಕೆ ಕಂಡಿದೆ.
ಸೆಪ್ಟಂಬರ್ ಮಧ್ಯದಿಂದೀಚೆಗೆ ಹೊಸ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದು, ಅಕ್ಟೋಬರ್‌ನಲ್ಲಿ ಇದರ ಸ್ಪಷ್ಟ ಚಿತ್ರಣ ಸಿಕ್ಕಿದೆ. ಅಕ್ಟೋಬರ್‌ನಲ್ಲಿ ಒಟ್ಟು 18.3 ಲಕ್ಷ ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, ಸೆಪ್ಟಂಬರ್‌ನಲ್ಲಿ ದಾಖಲಾದ 26.2 ಲಕ್ಷ ಪ್ರಕರಣಗಳಿಗೆ ಹೋಲಿಸಿದರೆ ಇದು ಶೇಕಡ 30ರಷ್ಟು ಕಡಿಮೆ. ಅಕ್ಟೋಬರ್‌ನ ಪ್ರಕರಣಗಳ ಸಂಖ್ಯೆ ಆಗಸ್ಟ್‌ಗಿಂತಲೂ ಕಡಿಮೆ. ಆಗಸ್ಟ್‌ನಲ್ಲಿ 19.9 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಇದು ಸೆಪ್ಟಂಬರ್ ಮಧ್ಯದಿಂದೀಚೆಗೆ ದೇಶದಲ್ಲಿ ಕೊರೋನ ವೈರಸ್ ಸೋಂಕು ಗಣನೀಯವಾಗಿ ಕಡಿಮೆಯಾಗುತ್ತಿದೆ ಎನ್ನುವುದರ ಸೂಚಕವಾಗಿದೆ.
ಕೋವಿಡ್-19 ಸಾವಿನಲ್ಲೂ ಇದೇ ಪ್ರವೃತ್ತಿ ಕಂಡುಬಂದಿದೆ. ಅಕ್ಟೋಬರ್‌ನಲ್ಲಿ 23,500 ಮಂದಿ ಸೋಂಕಿಗೆ ಬಲಿಯಾಗಿದ್ದು, ಇದು ಸೆಪ್ಟಂಬರ್‌ನಲ್ಲಿ ಮೃತಪಟ್ಟ 33,255 ಮಂದಿಗೆ ಹೋಲಿಸಿದರೆ ಶೇಕಡ 29ರಷ್ಟು ಕಡಿಮೆ. ಅಂತೆಯೇ ಅಕ್ಟೋಬರ್‌ನಲ್ಲಿ ಸಂಭವಿಸಿದ ಸಾವಿನ ಸಂಖ್ಯೆ ಆಗಸ್ಟ್ (28,859)ಗಿಂತಲೂ ಕಡಿಮೆ.
ಅಕ್ಟೋಬರ್‌ನಿಂದ ಮೊದಲು ಕೋವಿಡ್-19 ಸೋಂಕಿಗೆ ಬಲಿಯಾಗುತ್ತಿದ್ದವರ ಸಂಖ್ಯೆ ಪ್ರತಿ ತಿಂಗಳೂ ಹೆಚ್ಚುತ್ತಾ ಹೋಗಿತ್ತು. ಶನಿವಾರ ದೇಶದಲ್ಲಿ 46,899 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ ನಾಲ್ಕು ದಿನಗಳಲ್ಲಿ ಕನಿಷ್ಠ. 468 ಸೋಂಕಿತರು ಜೀವ ಕಳೆದುಕೊಂಡಿದ್ದು, ಇದು ಜುಲೈ 5ರ ಬಳಿಕ ಕನಿಷ್ಠ ಸಂಖ್ಯೆಯಾಗಿದೆ. ಅತಿಹೆಚ್ಚು ಬಾಧೆಗೀಡಾಗಿರುವ ಮಹಾರಾಷ್ಟ್ರದಲ್ಲಿ ಶನಿವಾರ ಸಾವಿನ ಪ್ರಮಾಣ ಶೇಕಡ 40ರಷ್ಟು ಕಡಿಮೆಯಾಗಿರುವುದು, ವೈರಸ್ ಅಲೆ ನಿಧಾನವಾಗಿ ನಶಿಸುತ್ತಿದೆ ಎನ್ನುವುದರ ಸೂಚಕ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.







