ಪ್ರತ್ಯೇಕ ತುಳು ರಾಜ್ಯಕ್ಕಾಗಿ ಬಾಂಬ್ ಸ್ಫೋಟಿಸಿ: ತುಳು ಅಕಾಡಮಿಯ ಅಧ್ಯಕ್ಷರದ್ದೆನ್ನಲಾದ ಆಡಿಯೋ ವೈರಲ್

ದಯಾನಂದ ಕತ್ತಲ್ ಸಾರ್, ಅಧ್ಯಕ್ಷರು, ತುಳು ಸಾಹಿತ್ಯ ಅಕಾಡಮಿ
ಮಂಗಳೂರು, ನ.1: ಪ್ರತ್ಯೇಕ ತುಳು ರಾಜ್ಯಕ್ಕಾಗಿ ಬಾಂಬ್ ಸ್ಫೋಟಿಸುವಂತೆ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ನೀಡಿದ್ದರೆನ್ನಲಾದ ಪ್ರಚೋದನಾತ್ಮಕ ಹೇಳಿಕೆಯ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ಪ್ರತ್ಯೇಕ ತುಳು ರಾಜ್ಯಕ್ಕಾಗಿ ಎಲ್ಲೆಡೆ ಹೋರಾಟ ಆಗಬೇಕು. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ‘ಬ್ಲಾಸ್ಟ್’ ಮಾಡಬೇಕು. ಟಯರ್ಗಳಿಗೆ ಬೆಂಕಿ ಹಚ್ಚಬೇಕು. ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಕಟೀಲು ಸೇರಿದಂತೆ ರಾಜಕೀಯ ನಾಯಕರಿಗೆಲ್ಲ ಹಿಗ್ಗಾಮುಗ್ಗ ಬೈಯ್ಯಬೇಕು ಎಂದು ಹೇಳುತ್ತಿರುವುದು ವೈರಲ್ ಆಡಿಯೋದಲ್ಲಿ ಕೇಳಿಬರುತ್ತಿದೆ. ತುಳುವಿನಲ್ಲಿರುವ ಈ ಮಾತುಕತೆಯಲ್ಲಿ, ರಾಜ್ಯದ ಮೂಲೆಮೂಲೆಯಲ್ಲೂ ತುಳುರಾಜ್ಯಕ್ಕಾಗಿ ಹೋರಾಟ ಆಗಬೇಕು. ಆಗ ಅಕಾಡಮಿಯವರಾದ ನಮ್ಮನ್ನು ಸಂಧಾನಕ್ಕೆ ಕರೆದು ಸರಕಾರದವರು ಮಾತನಾಡುತ್ತಾರೆ. ಆಗ ನಾವು ಹೋರಾಟಗಾರರನ್ನು ಸಮಾಧಾನಿಸಲು ಬೇರೆ ದಾರಿ ಇಲ್ಲ. ತುಳು ರಾಜ್ಯ ಘೋಷಣೆ ಮಾಡಿದರಷ್ಟೇ ಸಮಾಧಾನ ಆಗುತ್ತಾರೆ ಎಂದು ಹೇಳಿರುವುದಾಗಿ ಅವರದ್ದು ಎನ್ನಲಾದ ಧ್ವನಿಯ ಆಡಿಯೋದಲ್ಲಿ ಕೇಳಿಸುತ್ತದೆ.
ಸರಕಾರದ ಅಕಾಡಮಿಯ ಅಧ್ಯಕ್ಷರೆದ್ದನ್ನಲಾದ ಈ ಪ್ರಚೋದನಾತ್ಮಕ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ನಾನೇ ವೈರಲ್ ಮಾಡಿದ್ದು: ತುಳುನಾಡು ಟ್ರಸ್ಟ್ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್.ಉಳ್ಳಾಲ್
‘ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ತುಳುನಾಡು ಸ್ಥಾಪನೆಗಾಗಿ ಈ ರೀತಿ ಪ್ರಚೋದನಾತ್ಮಕವಾಗಿ ನನ್ನ ಜೊತೆಯೇ ಮಾತನಾಡಿದ್ದು. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಈ ರೀತಿ ಮಾತನಾಡುವುದು ಸರಿಯಲ್ಲ. ಇದೇ ಕಾರಣಕ್ಕೆ ಈ ಮಾತುಕತೆಯ ಆಡಿಯೋವನ್ನು ನಾನೇ ವೈರಲ್ ಮಾಡಿದ್ದು’’ ಎಂದು ತುಳುನಾಡು ಟ್ರಸ್ಟ್ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್.ಉಳ್ಳಾಲ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ತುಳು ಲಿಪಿ ವಿಚಾರವಾಗಿ ನಾನು ದಯಾನಂದ ಕತ್ತಲ್ ಸಾರ್ ಅವರನ್ನು ಮುಖತಃ ಭೇಟಿಯಾಗಿ ಮಾತನಾಡಿಸಿದ್ದೆ. ಈ ವೇಳೆ ಮಾಹಿತಿಗಾಗಿ ಅವರ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದೆ. ಕತ್ತಲ್ಸಾರ್ ಮಾತನಾಡುತ್ತಾ, ಪ್ರತ್ಯೇಕ ತುಳು ರಾಜ್ಯಕ್ಕಾಗಿ ತುಳುನಾಡು ಟ್ರಸ್ಟ್ ಮೂಲಕ ಹಿಂಸೆಗೆ ಇಳಿಯುವಂತೆ ಪ್ರಚೋದನಕಾರಿಯಾಗಿ ಅವರು ಮಾತುಗಳನ್ನು ಆಡಿದರು. ಇಂತಹ ಹೇಳಿಕೆಗಳಿಂದ ಭವಿಷ್ಯದಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದ್ದಲ್ಲಿ ಅದು ತುಳುನಾಡು ಟ್ರಸ್ಟ್ ಹೆಸರಿಗೆ ಬಂದರೆ ಯಾರು ಹೊಣೆ ಎಂಬ ಕಾರಣಕ್ಕೆ ಈ ಆಡಿಯೋ ವೈರಲ್ ಮಾಡಿದೆವು. ಅದಲ್ಲದೆ ಈ ಹೇಳಿಕೆ ಕುರಿತಂತೆ ಸಂಸದರು, ಸಂಬಂಧಪಟ್ಟ ಶಾಸಕರಿಗೂ ಮಾಹಿತಿ ನೀಡಿದ್ದೇವೆ’’ ಎಂದು ಹೇಳಿದ್ದಾರೆ.
ಇದು ತಿರುಚಿದ ಆಡಿಯೋ: ದಯಾನಂದ ಕತ್ತಲ್ಸಾರ್
ವೈರಲ್ ಆಡಿಯೋದಲ್ಲಿರುವ ಧ್ವನಿ ನನ್ನದೆ. ಆದರೆ ನನ್ನ ಮಾತುಗಳನ್ನು ಉದ್ದೇಶಪೂರ್ವಕವಾಗಿ ರೆಕಾರ್ಡ್ ಮಾಡಿ, ಅದನ್ನು ತಿರುಚಿ(ಎಡಿಟ್ ಮಾಡಿ) ವೈರಲ್ ಮಾಡಲಾಗಿದೆ ಎಂದು ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದ್ದಾರೆ.
ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ‘‘ಪ್ರತ್ಯೇಕ ತುಳು ರಾಜ್ಯ ಸ್ಥಾಪನೆಯ ಬೇಡಿಕೆಯ ವಿಚಾರವಾಗಿ ತುಳುನಾಡು ಟ್ರಸ್ಟ್ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್.ಉಳ್ಳಾಲ್ ನನ್ನೊಂದಿಗೆ ಚರ್ಚಿಸಿದ್ದರು. ಈ ವೇಳೆ ಕ್ಯಾಶುವಲ್ ಆಗಿ ಮಾತನಾಡುತ್ತಾ ತುಳು ರಾಜ್ಯಕ್ಕೆ ನನ್ನ ಬೆಂಬಲವಿದೆ. ಆದರೆ ನಾನು ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ನಡೆದಂತೆ ಹಿಂಸಾತ್ಮಾಕ ಹೋರಾಟ ಮಾಡುವುದು ಸರಿಯಲ್ಲ ಎಂದು ಹೇಳಿದ್ದೆ. ಇದೀಗ ಉದ್ದೇಶಪೂರ್ವಕವಾಗಿ ನನ್ನ ಮಾತುಗಳನ್ನು ಎಡಿಟ್ ಮಾಡಿ ತಿರುಚಿ ವೈರಲ್ ಮಾಡಿದ್ದಾರೆ. ಪರಿಶಿಷ್ಟ ಸಮುದಾಯದ ನಾನು ಈ ಮಟ್ಟಕ್ಕೇರಿರುವುದರ ಬಗ್ಗೆ ಹಲವರಿಗೆ ಹೊಟ್ಟೆಕಿಚ್ಚಿದೆ. ಇದೇ ಕಾರಣಕ್ಕೆ ನನ್ನ ವಿರುದ್ಧ ಈ ಷಡ್ಯಂತ್ರ ಮಾಡಿದ್ದಾರೆ’’ ಎಂದು ಆರೋಪಿಸಿದ್ದಾರೆ.







