ಗಾಂಧೀಜಿಯವರನ್ನು ‘ಪಾಕಿಸ್ತಾನದ ಜನಕ’ ಎಂದು ಕರೆದಿದ್ದ ಬಿಜೆಪಿ ನಾಯಕ ಐಐಎಂಸಿಯಲ್ಲಿ ಪ್ರೊಫೆಸರ್ ಆಗಿ ನೇಮಕ

ಹೊಸದಿಲ್ಲಿ, ನ.1: ಕಳೆದ ವರ್ಷ ಮಹಾತ್ಮಾ ಗಾಂಧೀಜಿಯವರನ್ನು ‘ಪಾಕಿಸ್ತಾನದ ಜನಕ’ ಎಂದು ಬಣ್ಣಿಸಿದ್ದ ಮಧ್ಯಪ್ರದೇಶ ಬಿಜೆಪಿ ಮಾಧ್ಯಮ ಘಟಕದ ಮಾಜಿ ಅಧ್ಯಕ್ಷ ಅನಿಲ್ ಕುಮಾರ ಸೌಮಿತ್ರ ಅವರನ್ನು ದಿಲ್ಲಿಯ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (ಐಐಎಂಸಿ)ನಲ್ಲಿ ಪ್ರೊಫೆಸರ್ ಆಗಿ ನೇಮಕ ಮಾಡಲಾಗಿದೆ.
ಸೌಮಿತ್ರ ನೇಮಕವು ವಿವಾದವೊಂದನ್ನು ಹುಟ್ಟುಹಾಕಿದ್ದು, ರಾಷ್ಟ್ರಪಿತನನ್ನು ಅವಮಾನಿಸಿದ್ದಕ್ಕಾಗಿ ಅವರನ್ನು ಪುರಸ್ಕರಿಸಲಾಗಿದೆ ಎಂದು ಟೀಕಾಕಾರರು ಹೇಳುತ್ತಿದ್ದಾರೆ.
2014ರಲ್ಲಿ ನರೇಂದ್ರ ಮೋದಿಯವರು ಭಾರತದ ಪ್ರಧಾನಿ ಹುದ್ದೆಗೇರಿದಾಗಿನಿಂದ ಬಿಜೆಪಿ ಮತ್ತು ಆರೆಸ್ಸೆಸ್ ಭಾರತದ ವಿಭಜನೆಗಾಗಿ ಗಾಂಧೀಜಿಯವರನ್ನು ದೂರುವುದರಿಂದ ದೂರವುಳಿದಿವೆ. ಆದರೆ ಸಂಘ ಪರಿವಾರ ಸಂಘಟನೆಗಳ ಮನಸ್ಸಿನಿಂದ ಈ ಅಭಿಪ್ರಾಯ ಮರೆಯಾಗಿಲ್ಲ.
ಗಾಂಧೀಜಿ ವಿರುದ್ಧ ಟೀಕೆಗಾಗಿ ಕಳೆದ ವರ್ಷ ಸೌಮಿತ್ರ ಅವರನ್ನು ಅಮಾನತುಗೊಳಿಸಿದಾಗ ಬಿಜೆಪಿಯು ಸ್ಪಷ್ಟೀಕರಣವೊಂದನ್ನು ನೀಡಿತ್ತು. ಸೌಮಿತ್ರರ ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ಪಕ್ಷದ ನೀತಿಗಳು,ಪರಿಕಲ್ಪನೆಗಳು ಮತ್ತು ತತ್ತ್ವಗಳಿಗೆ ವಿರುದ್ಧವಾಗಿವೆ ಹಾಗೂ ಪಕ್ಷದ ವರ್ಚಸ್ಸಿಗೆ ಚ್ಯುತಿಯನ್ನುಂಟು ಮಾಡಿವೆ ಎಂದು ಅದು ಹೇಳಿತ್ತು.
‘ಅವರು (ಗಾಂಧೀಜಿ) ರಾಷ್ಟ್ರಪಿತರಾಗಿದ್ದಾರೆ ನಿಜ, ಆದರೆ ಪಾಕಿಸ್ತಾನದ್ದು. ದೇಶವು ಅವರಂತಹ ಕೋಟ್ಯಂತರ ಪುತ್ರರನ್ನು ಹೊಂದಿದೆ. ಕೆಲವರು ಅರ್ಹರಾಗಿದ್ದಾರೆ, ಇನ್ನು ಕೆಲವರು ಅನರ್ಹರಾಗಿದ್ದಾರೆ’ ಎಂದು ಸೌಮಿತ್ರ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಬಳಿಕ ಬಿಜೆಪಿ ಅವರ ವಿರುದ್ಧ ಶಿಸ್ತುಕ್ರಮವನ್ನು ಕೈಗೊಂಡಿತ್ತು.
ಮಧ್ಯಪ್ರದೇಶದಲ್ಲಿ ಬಿಜೆಪಿಯ ಮುಖವಾಣಿಯಾಗಿರುವ ‘ಚರೈವೇತಿ’ ಮಾಸಿಕದ ಸಂಪಾದಕರಾಗಿದ್ದಾಗ ‘ಚರ್ಚ್ ಕೆ ನರಕ್ ಮೆ ಏಕ್ ನನ್‌ಕಾ ಜೀವನ್ (ಚರ್ಚ್‌ನ ನರಕದಲ್ಲಿ ನನ್‌ವೋರ್ವರ ಜೀವನ)’ ಎಂಬ ಲೇಖನವನ್ನು ಪ್ರಕಟಿಸಿದ್ದಕ್ಕಾಗಿ 2013ರಲ್ಲಿ ಸೌಮಿತ್ರರನ್ನು ಪಕ್ಷದ ಹುದ್ದೆಯಿಂದ ತೆಗೆಯಲಾಗಿತ್ತು. ಕೆಥೋಲಿಕ್ ಚರ್ಚ್‌ಗಳಲ್ಲಿ ನನ್‌ಗಳ ಲೈಂಗಿಕ ಶೋಷಣೆ ಸಾಮಾನ್ಯವಾಗಿದೆ ಎಂಬ ಆಧಾರರಹಿತ ಪ್ರತಿಪಾದನೆಯನ್ನು ಲೇಖನವು ಒಳಗೊಂಡಿತ್ತು.
ಮಾಜಿ ಲೋಕಸಭಾ ಸ್ಪೀಕರ್, ಆಗಿನ ಇಂದೋರ್ ಸಂಸದೆ ಮತ್ತು ಸಂಘ ಪರಿವಾರದ ಪಂಡಿತ ದೀನದಯಾಳ್ ವಿಚಾರ ಪ್ರಕಾಶನದ ಅಧ್ಯಕ್ಷೆ ಯಾಗಿದ್ದ ಸುಮಿತ್ರಾ ಮಹಾಜನ್ ಅವರಿಗೆ ಪತ್ರವನ್ನು ಬರೆದಿದ್ದ ಸೌಮಿತ್ರ,ತನ್ನನ್ನು ಅಪರಾಧಿಯಂತೆ ನಡೆಸಿಕೊಳ್ಳಲಾಗುತ್ತಿದೆ.ತನ್ನ ಆರೆಸ್ಸೆಸ್ ಹಿನ್ನೆಲೆ ಮತ್ತು ಸೈದ್ಧಾಂತಿಕ ಬದ್ಧತೆಯಿಂದಾಗಿ ತಾನು ‘ಚರೈವೇತಿ ’ಯ ಸಂಪಾದಕನಾಗಿ ಆಯ್ಕೆಯಾಗಿದ್ದೆ ಎಂದು ಹೇಳಿಕೊಂಡಿದ್ದರು. ಅವರು ಪತ್ರದ ಪ್ರತಿಗಳನ್ನು ಆರೆಸ್ಸೆಸ್ ನಾಯಕರಾದ ಮೋಹನ್ ಭಾಗವತ,ಸುರೇಶ ಜೋಶಿ ಮತ್ತು ಸುರೇಶ ಸೋನಿ,ಬಿಜೆಪಿ ನಾಯಕರಾದ ರಾಜನಾಥ ಸಿಂಗ್ ಮತ್ತು ಎಲ್.ಕೆ.ಆಡ್ವಾಣಿ ಹಾಗೂ ಹಾಲಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಸೇರಿದಂತೆ ರಾಜ್ಯನಾಯಕರಿಗೂ ರವಾನಿಸಿದ್ದರು.
ಇದೀಗ 60ಕ್ಕೂ ಹೆಚ್ಚಿನ ಅಭ್ಯರ್ಥಿಗಳ ಸಂದರ್ಶನಗಳ ಬಳಿಕ ಸೌಮಿತ್ರರನ್ನು ಐಐಎಂಸಿಯ ಪ್ರೊಫೆಸರ್ ಆಗಿ ನೇಮಕಗೊಳಿಸಲಾಗಿದೆ. ಐಐಎಂಸಿ ಅ.20ರಂದು ಎರಡು ವರ್ಷಗಳ ಪ್ರೊಬೇಷನ್ ಅವಧಿಗೆ ಅವರ ನೇಮಕಾತಿಯನ್ನು ಅಧಿಸೂಚಿಸಿದ್ದು, ಅ.26ರಂದು ಆದೇಶವೊಂದರ ಮೂಲಕ ಅವರು ಕರ್ತವ್ಯಕ್ಕೆ ಸೇರುವ ದಿನಾಂಕವನ್ನು ದೃಢಪಡಿಸಲಾಗಿದೆ.
ರಾಷ್ಟ್ರೀಯ ಮಾಧ್ಯಮಗಳ ಹಲವಾರು ಕರೆಗಳು ಮತ್ತು ಎಸ್‌ಎಂಎಸ್‌ಗಳಿಗೆ ಸೌಮಿತ್ರ ಪ್ರತಿಕ್ರಿಯಿಸಿಲ್ಲ. ಅವರ ನೇಮಕದ ಕುರಿತು ಪ್ರತಿಕ್ರಿಯಿಸಲು ಐಐಎಂಸಿಯ ಮಹಾ ನಿರ್ದೇಶಕ ಸಂಜಯ್ ದ್ವಿವೇದಿ ಅವರು ನಿರಾಕರಿಸಿದ್ದಾರೆ.







