ಪ್ರತ್ಯೇಕ ಕನ್ನಡ ಧ್ವಜಕ್ಕೆ ಮಾನ್ಯತೆ ನೀಡದೇ ಕೇಂದ್ರದಿಂದ ದ್ರೋಹ: ಸಿದ್ದರಾಮಯ್ಯ

ಬೆಂಗಳೂರು, ನ.1: ಕನ್ನಡದ ಚಾರಿತ್ರಿಕ ಬೆಳವಣಿಗೆ ಮತ್ತು ಸ್ವಾಭಿಮಾನದ ಸಂಕೇತವಾಗಿದ್ದ ಪ್ರತ್ಯೇಕ ಕನ್ನಡ ಧ್ವಜಕ್ಕೆ ಮಾನ್ಯತೆ ನೀಡದೆ ಕೇಂದ್ರ ಸರಕಾರ ದ್ರೋಹ ಎಸಗುತ್ತಲೇ ಇದೆ ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ರವಿವಾರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕ ರಾಜ್ಯವು ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರದ ಸರ್ವಾಧಿಕಾರಿ ನೀತಿಗಳಿಂದ ದಿನೇ ದಿನೇ ಸೊರಗುತ್ತಿರುವುದು ಅತ್ಯಂತ ಆತಂಕಕಾರಿಯಾದ ಸಂಗತಿಯಾಗಿದೆ. ಕನ್ನಡ ನಾಡಿನಲ್ಲಿ ಪ್ರಜ್ಞೆ ಇರುವವರೆಲ್ಲರೂ ಈ ಕುರಿತು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಕೇಂದ್ರದ ದೊಡ್ಡಣ್ಣನಂತಹ ನೀತಿಗಳ ವಿರುದ್ಧ ಧ್ವನಿ ಎತ್ತಲೇಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
ನಿಧಾನಕ್ಕೆ ಒಕ್ಕೂಟ ವ್ಯವಸ್ಥೆಯು ಕೇಂದ್ರೀಕೃತ ವ್ಯವಸ್ಥೆಯಾಗಲು ಪ್ರಾರಂಭವಾಗಿದೆ. ಹೀಗಾಗುವುದರ ವಿರುದ್ಧ ಹಲವು ಆಯೋಗಗಳು ವರದಿ ಸಲ್ಲಿಸಿವೆ. ಕೇಂದ್ರ - ರಾಜ್ಯ ಸಂಬಂಧಗಳ ಕುರಿತು ನ್ಯಾಯಾಲಯಗಳು ತೀರ್ಪು ನೀಡಿವೆ. ಧುರೀಣರು ಧ್ವನಿ ಎತ್ತಿದ್ದಾರೆ. ಆದರೆ, ಇನ್ನಷ್ಟು ಮತ್ತಷ್ಟು ಕೇಂದ್ರೀಕರಣ ಆಗುತ್ತಲೇ ಇದೆ ಎಂದು ಹೇಳಿದ್ದಾರೆ. ರಾಜ್ಯಗಳು ದುರ್ಬಲವಾಗುತ್ತಿವೆ. ಇದು ಒಳ್ಳೆಯ ಸೂಚನೆಯಲ್ಲ. ಇದನ್ನು ವಿರೋಧಿಸುವುದು ಅದರಲ್ಲೂ ಇದು ಪಕ್ಷಾತೀತವಾಗಿ ಎಲ್ಲರ ಕರ್ತವ್ಯವಾಗಿದೆ. ಈ ಸಂದರ್ಭದಲ್ಲಿ ನಾವು ಧ್ವನಿ ಎತ್ತದೇ ಹೋದರೆ ರಾಜ್ಯವು ಕೆಲವರ ಕಪಿಮುಷ್ಠಿಗೆ ಸಿಲುಕಿ ಶಾಶ್ವತ ಗುಲಾಮಗಿರಿಯತ್ತ ಸಾಗಿ ಬಿಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.







