ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಚಿಕ್ಕಮಗಳೂರಿನ ಇಬ್ಬರು ಯುವತಿಯರಿಗೆ ಪ್ರಶಸ್ತಿ

ವೇದಾ ಕೃಷ್ಣಮೂರ್ತಿ- ಅನುಶ್ರೀ
ಚಿಕ್ಕಮಗಳೂರು: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ಇಬ್ಬರು ಯುವತಿಯರಿಗೆ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ. ಕಡೂರಿನ ಕ್ರಿಕೆಟರ್ ವೇದಾ ಕೃಷ್ಣ ಮೂರ್ತಿಯವರಿಗೆ ಏಕಲವ್ಯ ಪ್ರಶಸ್ತಿ ನೀಡಲಾಗಿದ್ದು, ಕುಸ್ತಿಯಲ್ಲಿ ಸಾಧನೆಗೈದ ಕೊಪ್ಪದ ಮತ್ತೋರ್ವ ಯುವತಿ ಎಚ್.ಎಸ್ ಅನುಶ್ರೀ ಅವರಿಗೆ ಕ್ರೀಡಾ ರತ್ನ ಪಶಸ್ತಿ ಲಭಿಸಿದೆ.
ಅ.16,1992ರಲ್ಲಿ ಹುಟ್ಟಿರುವ ವೇದಾ ಕೃಷ್ಣ ಮೂರ್ತಿ ಸತತ ಪ್ರಯತ್ನದಿಂದ 2011ರಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಜೂ.30, 2011ರಂದು ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಕ್ರಿಕೆಟ್ ಪಂದ್ಯವಾಡುವ ಮೂಲಕ ಅವರು ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗಗಳೆರಡರಲ್ಲೂ ಪ್ರತಿಭೆ ತೋರಿರುವ ಅವರು ಭಾರತ ತಂಡದಲ್ಲಿ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.
ವೇದ ಕೃಷ್ಣಮೂರ್ತಿ ಇದುವರೆಗೆ 48 ಏಕದಿನ ಪಂದ್ಯ, 74 ಟಿ20 ಪಂದ್ಯಗಳನ್ನು ಭಾರತ ತಂಡದ ಪರವಾಗಿ ಆಡಿದ್ದಾರೆ. ಕಳೆದ ಬಾರಿಯ ಎರಡು ವಿಭಾಗದ ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದು ಉತ್ತಮವಾಗಿ ಆಟವಾಡಿದ್ದರು. ಜಿಲ್ಲೆಯಿಂದ ಭಾರತ ಕ್ರಿಕೆಟ್ ತಂಡದಲ್ಲಿ ಆಟವಾಡುತ್ತಿರುವ ಏಕೈಕ ಮಹಿಳೆಯಾಗಿದ್ದು, ಇವರ ಪ್ರತಿಭೆಯನ್ನು ಗುರುತಿಸಿ ಸರಕಾರ 2019-20ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಆಯ್ಕೆ ಮಾಡಿ ಗುರುತಿಸಿರುವುದು ಜಿಲ್ಲೆಯ ಜನರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಇನ್ನು ಕುಸ್ತಿ ಕ್ರೀಡೆಯಲ್ಲಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಪಾತ್ರರಾಗಿರುವ ಅನುಶ್ರೀ ಕೊಪ್ಪ ತಾಲೂಕಿನ ಬೆಳವಿನಕೊಡಿಗೆ ಗ್ರಾಮದ ಹೊಸಳ್ಳಿಯ ಶ್ರೀನಿವಾಸ್ ಮತ್ತು ಸುಲೋಚನಾ ದಂಪತಿ ಪುತ್ರಿ. ಗ್ರಾಮೀಣ ಪ್ರತಿಭೆಯಾಗಿರುವ ಅನುಶ್ರೀ ಕುಸ್ತಿಯಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ್ದು, ಸಣ್ಣ ವಯಸ್ಸಿನಿಂದಲೇ ಕ್ರೀಡಾಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಈಕೆ ಪ್ರಾರಂಭದಲ್ಲಿ ಕಬಡ್ಡಿಯಲ್ಲಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪ್ರೌಢಶಾಲಾ ವಿದ್ಯಾಭ್ಯಾಸದ ನಂತರ ಪಿಯುಸಿ ಶಿಕ್ಷಣವನ್ನು ಮೂಡುಬಿದಿರೆಯ ಆಳ್ವಾಸ ಕಾಲೇಜಿನಲ್ಲಿ ಮುಂದುವರಿಸಿದ್ದು, ಈ ಸಂದರ್ಭದಲ್ಲಿ ಕಾಲೇಜಿನ ಕ್ರೀಡಾ ಶಿಕ್ಷಕರ ಸಲಹೆಯಂತೆ ಮಹಿಳಾ ಕುಸ್ತಿಯಲ್ಲಿ ತರಭೇತಿ ಪಡೆದುಕೊಂಡು ಕುಸ್ತಿಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಧನೆ ಮಾಡಿದ್ದಾರೆ. ರಾಷ್ಟ್ರಮಟ್ಟದ ಎಸ್ಜಿಎಫ್ಐ ಕ್ರೀಡಾಕೂಟ, ರಾಷ್ಟ್ರೀಯ ಜ್ಯೂಜೂನಿಯರ್ ಮಹಿಳಾ ಕುಸ್ತಿ, ಅಖಿಲ ಭಾರತ ಅಂತರ್ ವಿವಿ ಕುಸ್ತಿ, ಮೈಸೂರು ದಸಾರ ಕುಸ್ತಿ, ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ನಡೆದ ರಾಷ್ಟ್ರ, ರಾಜ್ಯ ಮಟ್ಟದ ಕುಸ್ತಿಗಳಲ್ಲಿ 20ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಇವರ ಕ್ರೀಡಾಕ್ಷೇತ್ರದ ವಿಶೇಷ ಸಾಧನೆಯನ್ನು ಗಮನಿಸಿ ರಾಜ್ಯ ಸರಕಾರ ಈ ವರ್ಷದ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ.







