ವಿಧಾನಸಭಾ ಉಪಚುನಾವಣೆ: ಬಹಿರಂಗ ಸಭೆಯ ವೇದಿಕೆಯಲ್ಲೇ ಕುಸಿದು ಬಿದ್ದ ಜೆಡಿಎಸ್ ಅಭ್ಯರ್ಥಿ

ತುಮಕೂರು, ಅ.11: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರ ಇಂದು ಮುಕ್ತಾಯವಾಗಿದ್ದು, ಅಂತಿಮ ಹಂತದ ಕಸರತ್ತಿಗಾಗಿ ಜೆಡಿಎಸ್ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅಸ್ವಸ್ಥಗೊಂಡು ವೇದಿಕೆಯಲ್ಲಿಯೇ ಕುಸಿದು ಬಿದ್ದ ಘಟನೆ ನಡೆದಿದೆ.
ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಸ್ಥಾನವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿರುವ ಜೆಡಿಎಸ್ ಮುಖಂಡರು ಇಂದು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೂ ಶಿರಾ ನಗರದ ವಿವಿಧ ಬಡಾವಣೆ ಗಳಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಸಿದ್ದರು, ಈ ವೇಳೆ ತೆರೆದ ಜೀಪಿನಲ್ಲಿ ಬಿಸಿಲಿನಲ್ಲಿ ಸುತ್ತಾಡಿದ್ದ ಅಮ್ಮಾಜಮ್ಮ ಅವರು, ಯಾವುದೇ ವಿಶ್ರಾಂತಿ ಪಡೆಯದೆ ಬಹಿರಂಗ ಸಭೆಯ ವೇದಿಕೆಗೆ ಆಗಮಿಸಿದರು. ಬಹಿರಂಗ ಸಭೆಯನ್ನು ಉದ್ದೇಶಿಸಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡುವ ವೇಳೆ ಅಯಾಸದಿಂದ ತಲೆ ಸುತ್ತು ಬಂದು ವೇದಿಕೆಯಲ್ಲಿ ಕುಸಿದರು.
ತಕ್ಷಣವೇ ವೇದಿಕೆಯಲ್ಲಿದ್ದವರು, ಅಮ್ಮಾಜಮ್ಮ ಅವರನ್ನು ಉಪಚರಿಸಿದರು. ನಂತರ ಅವರನ್ನು ಅಸ್ಪತ್ರೆಗೆ ಕರೆದೊಯ್ಯಲಾಯಿತು. ನಿರಂತರವಾಗಿ ನಿಂತೇ ಇದ್ದ ಪರಿಣಾಮ ಆಯಾಸಕ್ಕೆ ಒಳಗಾಗಿದ್ದಾರೆ ಎಂದು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.
ಅಮ್ಮಾಜಮ್ಮ ಅವರು ಚುನಾವಣೆ ಟಿಕೆಟ್ ಘೋಷಣೆ ಮಾಡಿದ ದಿನವೇ ಕೋವಿಡ್ ಸೋಂಕು ತಗಲಿದ ಕಾರಣ ಚಿಕಿತ್ಸೆ ಪಡೆದು, ಚೇತರಿಸಿಕೊಂಡ ನಂತರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು.





