ಡ್ರಗ್ಸ್ ವಿರುದ್ಧ ಮುಂದುವರಿದ ಕಾರ್ಯಾಚರಣೆ : ಮಣಿಪಾಲದ ವೈದ್ಯ ವಿದ್ಯಾರ್ಥಿ ಸಹಿತ ಇಬ್ಬರು ಸೆರೆ
3.89 ಲಕ್ಷ ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ ವಶ

ಉಡುಪಿ, ನ.1: ಡ್ರಗ್ಸ್ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಿರುವ ಉಡುಪಿ ಪೊಲೀಸರು, ಈ ಸಂಬಂಧ ಮಣಿಪಾಲ ಕೆಎಂಸಿಯ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಇವರಿಂದ ಲಕ್ಷಾಂತರ ರೂ. ಮೌಲ್ಯದ ಬ್ರೌನ್‌ಶುಗರ್ ಸೇರಿದಂತೆ ಸಿಂಥೆಟಿಕ್ ಡ್ರಗ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಪಾಲದ ಅಪಾರ್ಟ್‌ಮೆಂಟೊಂದರ ನಿವಾಸಿ, ಕೆಎಂಸಿ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿ ಆದಿತ್ಯ ಪ್ರಭು ಹಾಗೂ ಅಮೆರಿಕಾ ಮೂಲದ ಅನಿವಾಸಿ ಭಾರತೀಯ ವಿದ್ಯಾರ್ಥಿ ಅನಿಶ್ ರಾಜನ್ ಬಂಧಿತ ಆರೋಪಿಗಳು. ಇವರಿಂದ 3,89,000 ರೂ. ಮೌಲ್ಯದ 32 ಗ್ರಾಂ ವಿದೇಶಿ ಹೈಡ್ರೊವಿಡ್ ಗಾಂಜಾ, 9 ಗ್ರಾಂ ಬ್ರೌನ್ ಶುಗರ್ ಹಾಗೂ 25 ಎಂಡಿಎಂಎ ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅ.31ರಂದು ಉಡುಪಿ ಹೆಚ್ಚುವರಿ ಎಸ್ಪಿ ಕುಮಾರ್ ಚಂದ್ರ ಖಚಿತ ಮಾಹಿತಿ ಮೇರೆಗೆ ಮಣಿಪಾಲದ ಅದಿತಿ ಸೌರಭ ಅಪಾರ್ಟ್‌ಮೆಂಟ್ಗೆ ದಾಳಿ ಮಾಡಿ ಈ ಡ್ರಗ್ಸ್‌ಗಳನ್ನು ವಶಪಡಿಸಿಕೊಂಡರು. ಈ ಸಂದರ್ಭ ಅಪಾರ್ಟ್‌ಮೆಂಟ್ ರೂಮ್ ನಂಬರ್ 204ರಲ್ಲಿ ವಾಸವಿದ್ದ ಆದಿತ್ಯ ಪ್ರಭುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಯಿತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಶ್ ರಾಜನ್‌ನನ್ನು ನ.1ರಂದು ವಶಕ್ಕೆ ಪಡೆದು ವಿಚಾರಣೆ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ. ಇನ್ನೂ ಹಲವರ ಬಂಧನಕ್ಕೆ ತನಿಖಾ ತಂಡ ಬಲೆ ಬೀಸಿದೆ. ಹಾಗೆಯೆ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಇನ್ನೂ ಮುಂದುವರಿಸಲಾಗುವುದು. ಕಳೆದ 1 ತಿಂಗಳಿನಿಂದ ಈವರೆಗೆ ಉಡುಪಿ ಪೊಲೀಸರು ವಶಪಡಿಸಿಕೊಳ್ಳುತ್ತಿರುವ ಸಿಂಥೆಟಿಕ್ ಡ್ರಗ್ಸ್ ಗಳ ನಾಲ್ಕನೆ ಪ್ರಕರಣ ಇದಾಗಿದೆ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಉಡುಪಿ ಎಸ್ಪಿ ವಿಷ್ಣುವರ್ಧನ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರ್ ಚಂದ್ರ ನೇತೃತ್ವದಲ್ಲಿ ಡಿವೈಎಸ್ಪಿ ಜೈಶಂಕರ್, ಕುಂದಾಪುರ ಎಎಸ್ಪಿ ಹರಿರಾಮ ಶಂಕರ್, ಮಣಿಪಾಲ ನಿರೀಕ್ಷಕ ಮಂಜುನಾಥ್ ಗೌಡ, ಎಸ್ಸೈ ರಾಜಶೇಖರ್, ಉಡುಪಿ ಸಹಾಯಕ ಡ್ರಗ್ಸ್ ಕಂಟ್ರೋಲರ್ ನಾಗರಾಜ್, ಗ್ರಾಮ ಲೆಕ್ಕಾಧಿಕಾರಿ ಗಳಾದ ಗಿರೀಶ್ ಗೌರವಗೋಶ್ ಮತ್ತು ಉಪೇಂದ್ರ ಕುಮಾರ್, ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ಆದರ್ಶ, ಆನಂದಯ್ಯ, ಸುದೀಪ್ ಹಾಗೂ ಡಿವೈಎಸ್‌ಪಿ ಕಚೇರಿಯ ಸಿಬ್ಬಂದಿಗಳಾದ ನವೀನ್ ಕುಮಾರ್, ಶಾಂತರಾಮ್, ಹೆಚ್ಚುವರಿ ಎಸ್ಪಿ ಕಚೇರಿಯ ಸಿಬ್ಬಂದಿಗಳಾದ ಅಶೋಕ ಪಾಟಕರ್ ಅವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.







