ಮಾಜಿ ಮೇಯರ್ ಸಂಪತ್ ರಾಜ್ ಪರಾರಿ ಸುದ್ದಿ ಬಗ್ಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ...

ಬೆಂಗಳೂರು, ನ. 1: ಮುನಿರತ್ನ ಮೇಲೆ ಎಫ್‍ಐಆರ್ ಗಳು ದಾಖಲಾಗುವುದು ಇನ್ನಮೇಲೆ ಆಗುತ್ತಲೇ ಇರುತ್ತವೆ. ಮತದಾರರ ಗುರುತಿನ ಚೀಟಿ ಪ್ರಕರಣ, ಸೆಟ್ ಆಫ್ ಬಾಕ್ಸ್ ಪ್ರಕರಣದಲ್ಲಿ ಇನ್ನೂ ಬಂಧನವಾಗಿಲ್ಲ. ಅದಕ್ಕೆ ಅವರೇ ಉತ್ತರ ಕೊಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿಕೆಗೆ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಡಿ.ಕೆ.ಶಿ, ನಾವು ಮುನಿರತ್ನನನ್ನು ತೆಗೆದು ಆಯ್ತಲ್ವಾ? ನಾವು ತೆಗೆದಿದ್ದಕ್ಕೆ ಅವರು ಕೋರ್ಟ್‍ಗೆ ಹೋಗಿದ್ದಲ್ವಾ? ಎಲ್ಲದಕ್ಕೂ 3ನೇ ತಾರೀಖು ಆಗಲಿ, ಉತ್ತರ ಕೊಡ್ತೀನಿ ಎಂದು ತಿಳಿಸಿದರು.
ನಾವು ಚರ್ಚ್, ಮಸೀದಿಗೆ ಪ್ರಾರ್ಥನೆಗೆಂದು ಹೋಗುತ್ತೇವೆ ಹೊರತು ವೋಟ್ ಕೇಳಲಿಕ್ಕಲ್ಲ. ಪಾಪ ಮುನಿರತ್ನ ಚಿಂತೆಯಲ್ಲಿದ್ದು, ಏನೇನೋ ಆಗ್ತಿದೆ ಅವರಿಗೆ. ಅವರ ಪಕ್ಷ ಸಾಕಷ್ಟು ಸಮಸ್ಯೆಯಲ್ಲಿದೆ. ಸಿಎಂ ಮುನಿರತ್ನರನ್ನು ಮಂತ್ರಿ ಮಾಡುತ್ತೇನೆ ಅಂದ ತಕ್ಷಣ ಎಲ್ಲಾ ಬಿಜೆಪಿ ಕಾರ್ಯಕರ್ತರು ಏನೇನೋ ಪಿತೂರಿ ಮಾಡ್ತಿದ್ದಾರೆ. ಕ್ಷೇತ್ರದ ಗೌರವ ಹಾಳು ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ನಾನು ಭ್ರಷ್ಟ ಆಗಿದ್ದರೆ ನನ್ನನ್ನು ಮೊದಲೇ ಹೊರ ಹಾಕಬೇಕಿತ್ತು ಅನ್ನೋ ಮುನಿರತ್ನ ಹೇಳಿಕೆ ವಿಚಾರ ಪ್ರಸ್ತಾಪಿಸಿ, ಅವನು ಭ್ರಷ್ಟ ಅನ್ನೋದು ತಡವಾಗಿ ಗೊತ್ತಾಯ್ತು. ಸಿದ್ದರಾಮಯ್ಯ ಹೇಳೋ ಹಾಗೆ, ಬರೀ ಸಿನಿಮಾದವನು ಅಂದುಕೊಂಡಿದ್ವಿ. ಆದರೆ, ಇವನು ಹೀಗೆ ಅಂತಾ ಈಗ ಗೊತ್ತಾಯ್ತು ಎಂದು ತಿಳಿಸಿದರು.
ಮಾಜಿ ಮೇಯರ್ ಸಂಪತ್ ರಾಜ್ ಎಲ್ಲೂ ಓಡಿ ಹೋಗಿಲ್ಲ. ಕೊರೋನ ಅಂತಾ ಮನೆಯಲ್ಲಿದ್ದಾರೆ. ಈ ಪೊಲೀಸರು ಸುಳ್ಳು-ಸುಳ್ಳು ಸುದ್ದಿ ಕೊಡ್ತಿದ್ದಾರೆ ಎಂದರು. ಡಿ.ಕೆ.ಶಿವಕುಮಾರ್ ಫೋನ್ ಕದ್ದಾಲಿಕೆ ವಿಚಾರವಾಗಿ ಮಾತನಾಡಿ, ಮುನಿರತ್ನನಿಗೆ ಎಲ್ಲವೂ ಗೊತ್ತಿದೆಯಂತಾ? ಎಂದು ಪ್ರಶ್ನಿಸಿದರು.







