ಎಂಟು ತಿಂಗಳುಗಳಲ್ಲಿ ಇದೇ ಮೊದಲ ಬಾರಿಗೆ 1 ಲಕ್ಷ ಕೋ.ರೂ. ದಾಟಿದ ಜಿಎಸ್‌ಟಿ ಸಂಗ್ರಹ

ಹೊಸದಿಲ್ಲಿ, ನ.1: ಅಕ್ಟೋಬರ್ ತಿಂಗಳಲ್ಲಿ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ)ಗಳ ಸಂಗ್ರಹ 1,05,155 ಕೋ.ರೂ.ಗಳಷ್ಟಾಗಿದೆ. ಇದರೊಂದಿಗೆ ಕಳೆದ ಫೆಬ್ರವರಿಯಿಂದೀಚಿಗೆ ಎಂಟು ತಿಂಗಳ ಅವಧಿಯಲ್ಲಿ ಜಿಎಸ್‌ಟಿ ಸಂಗ್ರಹ ಮೊತ್ತ ಇದೇ ಮೊದಲ ಬಾರಿಗೆ ಒಂದು ಲ.ಕೋ.ರೂ.ಗಳನ್ನು ದಾಟಿದೆ ಎಂದು ಕೇಂದ್ರ ವಿತ್ತ ಸಚಿವಾಲಯವು ರವಿವಾರ ತಿಳಿಸಿದೆ.
ಅ.31ರವರೆಗೆ ಒಟ್ಟು 80 ಲಕ್ಷ ಜಿಎಸ್‌ಟಿಆರ್-3ಬಿ ರಿಟರ್ನ್‌ಗಳು ಸಲ್ಲಿಕೆಯಾಗಿವೆ. ಒಟ್ಟು ಜಿಎಸ್‌ಟಿ ಆದಾಯದಲ್ಲಿ ಕೇಂದ್ರ ಜಿಎಸ್‌ಟಿ 19,193 ಕೋ.ರೂ.,ರಾಜ್ಯ ಜಿಎಸ್‌ಟಿ 5,411 ಕೋ.ರೂ.,ಏಕೀಕೃತ ಜಿಎಸ್‌ಟಿ 52,540 ಕೋ.ರೂ.ಮತ್ತು ಉಪತೆರಿಗೆ 8,011 ಕೋ.ರೂ.(ಸರಕುಗಳ ಆಮದುಗಳ ಮೇಲೆ ಸಂಗ್ರಹಿಸಿದ 932 ಕೋ.ರೂ.ಸೇರಿದಂತೆ) ಒಳಗೊಂಡಿವೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಂಗ್ರಹಿತ 95,379 ಕೋ.ರೂ.ಜಿಎಸ್‌ಟಿಗೆ ಹೋಲಿಸಿದರೆ ಹಾಲಿ ವರ್ಷದ ಅಕ್ಟೋಬರ್‌ನಲ್ಲಿ ಶೇ.10ರಷ್ಟು ಆದಾಯ ಹೆಚ್ಚಾಗಿದೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಹಾಲಿ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಸರಕುಗಳ ಆಮದಿನಿಂದ ಶೇ.9ರಷ್ಟು ಮತ್ತು ದೇಶೀಯ ವಹಿವಾಟು (ಸೇವೆಗಳ ಆಮದು ಸೇರಿದಂತೆ)ಗಳಿಂದ ಶೇ.11ರಷ್ಟು ಹೆಚ್ಚುವರಿ ಆದಾಯ ಸಂಗ್ರಹವಾಗಿದೆ. ಹಾಲಿ ವರ್ಷದ ಜುಲೈ,ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳುಗಳಿಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಆದಾಯ ಹೆಚ್ಚಳವು ಅನುಕ್ರಮವಾಗಿ ಮೈನಸ್ ಶೇ.14,ಮೈನಸ್ ಶೇ.8 ಮತ್ತು ಶೇ.5 ಆಗಿರುವುದು ಆರ್ಥಿಕ ಚೇತರಿಕೆ ಮತ್ತು ಆದಾಯ ಚೇತರಿಕೆಗಳನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಸಚಿವಾಲಯವು ತಿಳಿಸಿದೆ.







