ದಿಲ್ಲಿ ದಂಗೆಗಳು: ವಿವಿಧ ಸ್ವರೂಪಗಳ ಎಫ್‌ಐಆರ್ ವಿಂಗಡಿಸುವಂತೆ ಪೊಲೀಸರಿಗೆ ನ್ಯಾಯಾಲಯದ ಆದೇಶ

ಹೊಸದಿಲ್ಲಿ, ನ.1: ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ದಿಲ್ಲಿ ದಂಗೆಗಳ ಸಂದರ್ಭ ಜೀವಹಾನಿ ಮತ್ತು ಆಸ್ತಿನಷ್ಟಕ್ಕೆ ಸಂಬಂಧಿಸಿದ ಹಲವಾರು ದೂರುಗಳನ್ನು ಒಂದೇ ಪ್ರಕರಣದಲ್ಲಿ ಒಟ್ಟು ಸೇರಿಸಿರುವ ದಿಲ್ಲಿ ಪೊಲೀಸರ ಕಾರ್ಯವೈಖರಿಗೆ ಅಸಮ್ಮತಿಯನ್ನು ಸೂಚಿಸಿರುವ ದಿಲ್ಲಿಯ ಕಾಕರಡೂಮಾ ಮಹಾನಗರ ನ್ಯಾಯಾಲಯವು ಸಿದ್ಧ ಉಡುಪುಗಳ ವ್ಯಾಪಾರಿ ನಿಸಾರ್ ಅಹ್ಮದ್ ಎನ್ನುವವರು ದಾಖಲಿಸಿರುವ ದೂರಿನ ಕುರಿತು ಪ್ರತ್ಯೇಕ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿದೆ.
ಫೆ.25ರಂದು ಬೆಳಿಗ್ಗೆ ಭಾಗೀರಥಿ ವಿಹಾರದಲ್ಲಿರುವ ಅಹ್ಮದ್ ಅವರ ಮನೆ ಮತ್ತು ಸಿದ್ಧ ಉಡುಪುಗಳ ಗೋದಾಮಿಗೆ ದಾಳಿ ಮಾಡಿದ್ದ ಗುಂಪು 10 ಲ.ರೂ.ಮೌಲ್ಯದ ಸೊತ್ತುಗಳನ್ನು ಲೂಟಿ ಮಾಡಿತ್ತು. ಅಹ್ಮದ್ ಅವರಿಗೆ ಸೇರಿದ ಮೂರು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಅಹ್ಮದ್‌ರ ಸೊಸೆಗೆ ಸೇರಿದ ಚಿನ್ನಾಭರಣಗಳು ಮತ್ತು ಇತರ ಸೊತ್ತುಗಳಿದ್ದ ಭಾರೀ ಟ್ರಂಕ್‌ವೊಂದನ್ನೂ ಗುಂಪು ಹೊತ್ತೊಯ್ದಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.
ಅಹ್ಮದ್ ದೂರಿನ ಮೇರೆಗೆ ಸೂಕ್ತ ಪ್ರಕರಣವನ್ನು ದಾಖಲಿಸಲು ಪೊಲೀಸರು ನಿರಾಕರಿಸಿದಾಗ ಅವರ ವಕೀಲ ಎಂ.ಆರ್.ಶಂಷಾದ್ ಅವರು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿ,ಗೋಕುಲಪುರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ನಂ.78/2020ರಲ್ಲಿ ಅರ್ಜಿದಾರರ ದೂರನ್ನು ಇತರ ದೂರುಗಳೊಂದಿಗೆ ಸೇರಿಸಲಾಗಿದೆ ಮತ್ತು ಅರ್ಜಿದಾರರನ್ನು ಇತರ ಮೂರು ಎಫ್‌ಐಆರ್‌ಗಳಲ್ಲಿ ಸಾಕ್ಷಿಯನ್ನಾಗಿ ಮಾಡಲಾಗಿದೆ ಎಂದು ತಿಳಿಸಿದ್ದರು. ಪ್ರಕರಣದಲ್ಲಿ ಅಹ್ಮದ್ ಹೆಸರಿಸಿರುವ ದುಷ್ಕರ್ಮಿಗಳನ್ನು ರಕ್ಷಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದೂ ಶಂಷಾದ್ ಆರೋಪಿಸಿದ್ದರು.
ಗೋಕುಲಪುರಿ ಠಾಣೆಯಲ್ಲಿ ಸಿದ್ಧಪಡಿಸಲಾಗಿರುವ 78/2020 ಸಂಖ್ಯೆಯ ಎಫ್‌ಐಆರ್‌ನಿಂದ ಪ್ರತ್ಯೇಕವಾದ ಎಫ್‌ಐಆರ್‌ನ ದಾಖಲಾತಿಯನ್ನು ಕೋರಿ ಅಹ್ಮದ್ ಸಲ್ಲಿಸಿದ್ದ ಅರ್ಜಿಯ ಕುರಿತು ತನ್ನ ಇತ್ತೀಚಿನ ಆದೇಶದಲ್ಲಿ ಮಹಾನಗರ ನ್ಯಾಯಾಧೀಶ ರಾಕೇಶ್ ಕುಮಾರ ರಾಮಪುರಿ ಅವರು,ಪ್ರಕರಣಗಳಲ್ಲಿ ನ್ಯಾಯಪರತೆಯನ್ನು ಖಚಿತಪಡಿಸಲು ವಿವಿಧ ಸ್ವರೂಪಗಳ ಎಫ್‌ಐಆರ್‌ಗಳನ್ನು ಪ್ರತ್ಯೇಕಿಸುವಂತೆ ಪೊಲೀಸರಿಗೆ ನಿರ್ದೇಶ ನೀಡಿದ್ದಾರೆ. ಅಹ್ಮದ್‌ರ ದೂರಿನ ಮೇರೆಗೆ ಐದು ದಿನಗಳಲ್ಲಿ ಎಫ್‌ಐಆರ್ ದಾಖಲಿಸುವಂತೆಯೂ ಸಂಬಂಧಿತ ಪೊಲೀಸ್ ಠಾಣಾಧಿಕಾರಿಗೆ ಅವರು ಆದೇಶಿಸಿದ್ದಾರೆ.
ತನ್ನ ದೂರಿನಲ್ಲಿಯ ವಿವರಗಳನ್ನು ವಿಚಾರಿಸಿ ತನಗೆ ಬೆದರಿಕೆ ಕರೆಗಳೂ ಬಂದಿದ್ದು,ದೂರನ್ನು ಹಿಂದೆಗೆದುಕೊಳ್ಳುವಂತೆ ತನ್ನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಅಹ್ಮದ್ ಈ ಮೊದಲು ಆರೋಪಿಸಿದ್ದರು. ತಾನು ದೂರಿನಲ್ಲಿ ಹೆಸರಿಸಿದ್ದ ದುಷ್ಕರ್ಮಿಗಳ ಪರ ಮಧ್ಯಸ್ಥಿಕೆ ವಹಿಸಿದ್ದ ಸ್ಥಳೀಯ ಬಿಜೆಪಿ ಕೌನ್ಸಿಲರ್ ಕನೈಯಾ ಲಾಲ್ ಅವರು ತನಗೆ ಬೆದರಿಕೆಯೊಡ್ಡಿದ್ದರು ಎಂದೂ ಅವರು ಆಪಾದಿಸಿದ್ದರು.







