ಕೊರೋನ ಉಲ್ಬಣ: ಬ್ರಿಟನ್‌ನಲ್ಲಿ ನಾಲ್ಕು ವಾರ ಲಾಕ್‌ಡೌನ್

ಲಂಡನ್, ನ.1: ಕೊರೋನ ವೈರಸ್ ಹಾವಳಿ ಉಲ್ಬಣಿಸುವ ಸಾಧ್ಯತೆಯಿದೆಯೆಂದು ಆಸ್ಪತ್ರೆಗಳು ಹಾಗೂ ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ದೇಶಾದ್ಯಂತ ನಾಲ್ಕು ವಾರಗಳ ಕೋವಿಡ್-19 ಲಾಕ್‌ಡೌನ್ ಘೋಷಿಸಿದ್ದಾರೆ.
ಮಂಗಳವಾರದಿಂದ ಲಾಕ್‌ಡೌನ್ ಜಾರಿಗೆ ಬರಲಿದ್ದು, ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಜನರು ಮನೆಯಲ್ಲೇ ಉಳಿದುಕೊಳ್ಳಬೇಕೆಂದು ನೂತನ ಕಾನೂನಿನಲ್ಲಿ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಉದ್ಯೋಗ, ಶಿಕ್ಷಣ ಅಥವಾ ಜಿಮ್ ಮತ್ತಿತರ ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯ್ತಿ ನೀಡಲಾಗಿದೆ. ಆದರೆ ಅವಶ್ಯಕ ವಸ್ತುಗಳ ಸಾಮಾಗ್ರಿಗಳ ಮಳಿಗೆಗಳನ್ನು ಮುಚ್ಚುಗಡೆಗೊಳಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಬ್ರಿಟನ್ ಲಾಕ್‌ಡೌನ್ ಘೋಷಿಸಿದಾಗ ಶಾಲೆಗಳು, ಕಾಲೇಜುಗಳು ಹಾಗೂ ವಿವಿಗಳನ್ನು ಮುಚ್ಚುಗಡೆಗೊಳಿಸಲಾಗಿದೆ. ಆದರೆ ನೂತನ ಲಾಕ್‌ಡೌನ್‌ನಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದಿಡಲು ಅನುಮತಿ ನೀಡಲಾಗಿದೆ. ಪಬ್ ಹಾಗೂ ರೆಸ್ಟಾರೆಂಟ್‌ಗಳನ್ನು ಮುಚ್ಟಲು ಆದೇಶಿಸಲಾಗಿದೆ. ನೂತನ ನಿರ್ಬಂಧಗಳು ಡಿಸೆಂಬರ್ 2ರವರೆಗೆ ಮುಂದುವರಿಯುವ ನಿರೀಕ್ಷಯಿದೆ ಎಂದು ಮೂಲಗಳು ಹೇಳಿವೆ.
ಶನಿವಾರ ಬೆಳಗ್ಗೆ ಡೌನಿಂಗ್ ಸ್ಟ್ರೀಟ್‌ನಲ್ಲಿ ತನ್ನ ಅಧಿಕೃತ ನಿವಾಸದಲ್ಲಿ ಸಂಪುಟದ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪ್ರಧಾನಿ ಬೋರಿಸ್ ಜಾನ್ಸನ್ ಅವರು ‘‘ಕ್ರಮ ಕೈಗೊಳ್ಳಲೇಬೇಕಾದ ಸಮಯ ಈಗ ಬಂದಿದೆ, ಯಾಕೆಂದರೆ ನಮಗೆ ಬೇರೆ ಯಾವುದೇ ಪರ್ಯಾಯ ಮಾರ್ಗವಿಲ್ಲ’’ ಎಂದು ಹೇಳಿದರು.
‘‘ಪ್ರಕೃತಿಯ ಎದುರು ನಾವು ವಿನೀತರಾಗಬೇಕಿದೆ. ಯುರೋಪ್‌ನ ಹೆಚ್ಚಿನೆಡೆ ಇರುವಂತೆ ಬ್ರಿಟನ್‌ನಲ್ಲಿಯೂ ಕೋರೋನ ವೈರಸ್ ನಮ್ಮ ವೈಜ್ಞಾನಿಕ ಸಲಹೆಗಾರರು ಅಂದಾಜಿಸಿದ್ದಕ್ಕಿಂತಲೂ ವೇಗವಾಗಿ ಹರಡುತ್ತಿದೆ’’ ಎಂದು ಜಾನ್ಸನ್ ತಿಳಿಸಿದರು.
ಕೊರೋನ ವೈರಸ್ ಹಾವಳಿಯಿಂದ ತತ್ತರಿಸಿರುವ ಬ್ರಿಟನ್‌ನಲ್ಲಿ ಈಗ ಸೋಂಕಿತರ ಸಂಖ್ಯೆ 10 ಲಕ್ಷವನ್ನು ದಾಟಿದೆ. ಶನಿವಾರ ಒಂದೇ ದಿನದಲ್ಲಿ 22 ಸಾವಿರ ಮಂದಿಗೆ ಹೊಸತಾಗಿ ಸೋಂಕು ದೃಢಪಟ್ಟಿದೆ. ಕಳೆದ 24 ತಾಸುಗಳಲ್ಲಿ 1,239 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಇದು ಏಪ್ರಿಲ್‌ನಿಂದೀಚೆಗೆ ಒಂದು ದಿನದ ಗರಿಷ್ಠ ಏರಿಕೆಯಾಗಿದೆ.