ದ್ವೇಷ ಪ್ರಸಾರ ಮಾಡುವ ಮೂಲಕ ಚುನಾವಣೆಯಲ್ಲಿ ಹೋರಾಡಬಾರದು: ರಾಜನಾಥ್ ಸಿಂಗ್

ಹೊಸದಿಲ್ಲಿ, ನ.1: ಜನತೆಯಲ್ಲಿ ದ್ವೇಷ ಪ್ರಸಾರ ಮಾಡುವ ಮೂಲಕ ಚುನಾವಣೆಯಲ್ಲಿ ಹೋರಾಡಬಾರದು ಮತ್ತು ಗೆಲ್ಲಬಾರದು. ಆರೋಗ್ಯವಂತ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಹಿಯಾದ ಮತ್ತು ಕಟುವಾದ ಹೇಳಿಕೆಗಳಿಗೆ ಜಾಗವಿಲ್ಲ ಎಂದು ಹಿರಿಯ ಬಿಜೆಪಿ ಮುಖಂಡ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ದೇಶದಲ್ಲಿ ರಾಜಕೀಯ ಭಾಷಣ, ಸಂವಾದದ ಮೌಲ್ಯ ಕುಸಿಯುತ್ತಿರುವುದು ತೀವ್ರ ಆತಂಕಕಾರಿಯಾಗಿದೆ ಎಂದ ಅವರು, ರಾಜಕೀಯ ಮುಖಂಡರ ದ್ವೇಷದ ಮಾತು, ವೈಯಕ್ತಿಕ ನಿಂದನೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತದೆ ಎಂದವರು ಹೇಳಿದ್ದಾರೆ. ಭಾಷಣದ ಸಂದರ್ಭ ಕಹಿ ಮಾತು, ಆಧಾರರಹಿತ ಕಟು ಟೀಕೆ, ಪರಸ್ಪರ ವೈಯಕ್ತಿಕ ನಿಂದನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಇದರ ಬದಲು, ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಸಂವಾದ, ಚರ್ಚೆ ಅಥವಾ ವಾದ ಮಂಡಿಸುವ ಅಗತ್ಯವಿದೆ ಎಂದು ಹೇಳಿದರು.
ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಮೈತ್ರಿಕೂಟದಿಂದ ಹೊರಗುಳಿದಿರುವುದು ಚುನಾವಣೆಯಲ್ಲಿ ಆಡಳಿತದಲ್ಲಿರುವ ಮೈತ್ರಿಕೂಟದ ಸಾಧನೆಯ ಮೇಲೆ ಯಾವುದೇ ಪರಿಣಾಮ ಬೀರದು ಎಂದರು. ಬಿಹಾರದಲ್ಲಿ ಎಲ್‌ಜೆಪಿ ಜೊತೆಗೆ ಬಿಜೆಪಿ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂಬ ವರದಿ ಆಧಾರರಹಿತವಾಗಿದೆ. ಬಿಜೆಪಿ ನ್ಯಾಯಯುಕ್ತ ರಾಜಕೀಯದಲ್ಲಿ ನಂಬಿಕೆಯಿರಿಸಿದೆ ಮತ್ತು ಜನರ ವಿಶ್ವಾಸಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂದವರು ಹೇಳಿದರು.
ಚುನಾವಣಾ ಪ್ರಚಾರ ಸಭೆಯಲ್ಲಿ ಚಿರಾಗ್ ಪಾಸ್ವಾನ್ ಮುಖ್ಯಮಂತ್ರಿ ನಿತೀಶ್ ವಿರುದ್ಧ ಮಾತ್ರ ಟೀಕಾ ಪ್ರಹಾರ ಮುಂದುವರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್, ವೈಯಕ್ತಿಕ ದ್ವೇಷತ್ವ ಆರೋಗ್ಯಕರ ರಾಜಕೀಯಕ್ಕೆ ಒಳ್ಳೆಯದಲ್ಲ ಎಂದರು.







