ಚೀನಾದಲ್ಲಿ ದಶಕದ ಜನಗಣತಿ ಆರಂಭ

ಶಾಂಘೈ, ನ.1: ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾದ ಚೀನಾವು ರವಿವಾರದಂದು ದಶಕದ ಬೃಹತ್ ಜನಗಣತಿಯನ್ನು ಆರಂಭಿಸಿದೆ.
ಎರಡು ತಿಂಗಳುಗಳ ಕಾಲ ನಡೆಯಲಿರುವ ಜನಗಣತಿಯನ್ನು ಸುಮಾರು 70 ಲಕ್ಷ ಸಾಮುದಾಯಿಕ ಕಾರ್ಯಕರ್ತರು ಹಾಗೂ ಸ್ವಯಂಸೇವಕರು ನಡೆಸಲಿದ್ದಾರೆ. ಭಾರೀ ಜನದಟ್ಟಣೆಯ ನಗರವಾದ ಶಾಂಘೈನಿಂದ ಹಿಡಿದು, ದುರ್ಗಮವಾದ ಟಿಬೆಟ್ ಪರ್ವತ ಶಿಖರಗಳಲ್ಲಿರುವ ಗ್ರಾಮಗಳವರೆಗೂ ಜನಗಣತಿ ಕಾರ್ಯ ನಡೆಯಲಿದೆ.
ತನ್ನ ಜನಸಂಖ್ಯಾ ಬೆಳವಣಿಗೆಯನ್ನು ತಿಳಿದುಕೊಳ್ಳಲು ಚೀನಾವು ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿಯನ್ನು ನಡೆಸುತ್ತಿದೆ.
2010ರಲ್ಲಿ ನಡೆಸಿದ ಜನಗಣತಿಯಲ್ಲಿ ಚೀನಾದ ಮುಖ್ಯಭೂಮಿಯಲ್ಲಿನ ಜನಸಂಖ್ಯೆ 133,97,24,852 ಕೋಟಿ ಯಿತ್ತು. ಇದು 2000ನೇ ಇಸವಿಯಲ್ಲಿದ್ದ ಜನಸಂಖ್ಯೆಗಿಂತ ಶೇ.5.83ರಷ್ಟು ಏರಿಕೆ ಕಂಡುಬಂದಿತ್ತು.ತನ್ನ ಏಕಮಗು ನೀತಿಯಲ್ಲಿ ಸಡಿಲಿಕೆ ಮಾಡಿದ ಕಾರಣದಿಂದಾಗಿ ಚೀನಾದ ಜನಸಂಖ್ಯೆಯಲ್ಲಿ ಮತ್ತೆ ತೀವ್ರ ಏರಿಕೆಯಾಗಿದೆಯೇ ಎಂಬುದರ ಬಗೆಗೂ ಜನಗಣತಿ ಬೆಳಕು ಚೆಲ್ಲಲಿದೆ.
Next Story