ನಾಗರಿಕ ಸೇವಾ ಪರೀಕ್ಷೆ ಅರ್ಜಿಯಲ್ಲಿ ಅಸ್ಸಾಂ ಸರಕಾರದಿಂದ ‘ಲಿಂಗಾಂತರಿ’ ಕಲಂ ಪರಿಚಯ

ಹೊಸದಿಲ್ಲಿ, ನ. 1: ಅಸ್ಸಾಂ ನಾಗರಿಕ ಹಾಗೂ ಸಂಬಂಧಿತ ಸೇವೆಗಳ ಪರೀಕ್ಷೆ ಅರ್ಜಿಯ ಲಿಂಗತ್ವ ಕಲಂನಲ್ಲಿ ‘ಲಿಂಗಾಂತರಿ’ಗಳಿಗೆ ಆಯ್ಕೆ ನೀಡುವ ಮೂಲಕ ಅಸ್ಸಾಂ ನಾಗರಿಕ ಸೇವಾ ಆಯೋಗ (ಎಪಿಎಸ್‌ಸಿ) ಲಿಂಗತ್ವ ಸಮಾನತೆಯ ಕಡೆಗೆ ಪ್ರಗತಿಪರ ಹೆಜ್ಜೆ ಇರಿಸಿದೆ.
ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ‘ಲಿಂಗಾಂತರಿ’ ವರ್ಗದಲ್ಲಿ 42 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಆಯೋಗ ಸಂಯೋಜಿತ ಸ್ಪರ್ಧಾತ್ಮಕ (ಪೂರ್ವಭಾವಿ) ಪರೀಕ್ಷೆ 2020ರ ಅರ್ಜಿಯಲ್ಲಿ ಲಿಂಗತ್ವ ಕಲಂನಲ್ಲಿ ಮೊದಲ ಬಾರಿಗೆ ‘ಲಿಂಗಾಂತರಿ’ಗಳನ್ನು ಸೇರಿಸುವುದಕ್ಕಾಗಿ ಈ ಹಿಂದಿನ ನೋಟಿಸಿಗೆ ಸೆಪ್ಟಂಬರ್ 15ರಂದು ಅನುಬಂಧ ಪ್ರಕಟಿಸಿತ್ತು ಎಂದು ಎಪಿಎಸ್‌ಸಿಯ ಅಧ್ಯಕ್ಷ ಪಲ್ಲವ ಭಟ್ಚಾಚಾರ್ಯ ಹೇಳಿದ್ದಾರೆ.
‘‘ಅಸ್ಸಾಂ ನಾಗರಿಕ ಸೇವೆಯ ಹಿರಿಯ ಶ್ರೇಣಿ ಹಾಗೂ ಇತರ ಸಂಬಂಧಿತ ಸೇವೆಯ ಹುದ್ದೆಗಳ ನೇಮಕಾತಿಗೆ ‘ಲಿಂಗಾಂತರಿ’ ವರ್ಗದಲ್ಲಿ 42 ಅರ್ಜಿಗಳನ್ನು ಸ್ವೀಕರಿಸಿದ್ದೇವೆ’’ ಎಂದು ಭಟ್ಟಾಚಾರ್ಯ ತಿಳಿಸಿದ್ದಾರೆ.
‘ಲಿಂಗಾಂತರಿ’ ಆಯ್ಕೆಯನ್ನು ಕೇಂದ್ರ ಲೋಕಸೇವಾ ಆಯೋಗ ತನ್ನ ನೇಮಕಾತಿ ಪ್ರಕ್ರಿಯೆಗಳಲ್ಲಿ ಈಗಾಗಲೇ ಪರಿಚಯಿಸಿದೆ. ಆದರೆ, ಈ ಆಯ್ಕೆಯನ್ನು ಪರಿಚಯಿಸುತ್ತಿರುವ ಮೊದಲ ರಾಜ್ಯ ಅಸ್ಸಾಂ ಎಂದು ಎಪಿಎಸ್‌ಸಿಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ‘ಲಿಂಗಾಂತರಿ’ಗಳ ಸಾಮಾಜಿಕ ಹಾಗೂ ಆರ್ಥಿಕ ಸ್ಥಾನಮಾನ ಪರಿಗಣಿಸಿದರೆ, 42 ‘ಲಿಂಗಾಂತರಿ’ಗಳು ಅರ್ಜಿ ಸಲ್ಲಿಸಿರುವುದು ಉತ್ತಮ ವಿಷಯ ಎಂದು ಅಸ್ಸಾಂ ರಾಜ್ಯ ಲಿಂಗಾಂತರಿ ಕಲ್ಯಾಣ ಮಂಡಳಿಯ ಉಪಾಧ್ಯಕ್ಷೆ ಸ್ವಾತಿ ಬಿಧ್ವಾನ್ ಬರುವಾ ತಿಳಿಸಿದ್ದಾರೆ.