ಜಲ ವಿಮಾನ ಸೇವೆಗೆ ಇನ್ನೂ 14 ಏರೋಡ್ರೋಮ್ ನಿರ್ಮಿಸಲು ಕೇಂದ್ರ ಚಿಂತನೆ
ಹೊಸದಿಲ್ಲಿ, ನ.1: ಜಲವಿಮಾನ ಸೇವೆಗೆ ದೇಶಾದ್ಯಂತ ಇನ್ನೂ 14 ಏರೋಡ್ರೋಮ್‌ಗಳನ್ನು ನಿರ್ಮಿಸಲು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ.
ಇದು ಲಕ್ಷದ್ವೀಪ, ಅಂಡಮಾನ್ ಹಾಗೂ ನಿಕೋಬಾರ್, ಅಸ್ಸಾಂ, ಮಹಾರಾಷ್ಟ್ರ ಹಾಗೂ ಉತ್ತರಾಖಂಡ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಜಲ ವಿಮಾನ ಸೇವೆಯನ್ನು ಸುಗಮಗೊಳಿಸಲಿದೆ.
ಆರ್‌ಸಿಎಸ್ ಉಡಾನ್ ಯೋಜನೆ ಅಡಿಯಲ್ಲಿ ದೇಶಾದ್ಯಂತ ಇನ್ನೂ 14 ಜಲ ಏರೋಡ್ರೋಮ್‌ಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಚಿಂತಿಸುತ್ತಿದೆ. ಹೈಡ್ರೋಗ್ರಾಫಿಕ್ ಸಮೀಕ್ಷೆ ನಡೆಸುವಂತೆ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಹಾಗೂ ನಾಗರಿಕ ವಿಮಾನ ಯಾನ ಸಚಿವಾಲಯ (ಎಂಒಸಿಎ) ಭಾರತದ ಒಳನಾಡು ಜಲಮಾರ್ಗ ಪ್ರಾಧಿಕಾರ (ಐಡಬ್ಲುಎಐ)ದಲ್ಲಿ ವಿನಂತಿಸಿದೆ. ಅಲ್ಲದೆ ಪ್ರಯಾಣಿಕರ ಸಂಚಾರ ಸುಗಮಗೊಳಿಸಲು ಜೆಟ್ಟಿಗಳ ಸ್ಥಾಪನೆಗೆ ನೆರವು ನೀಡುವಂತೆ ಕೋರಿದೆ. ಗುಜರಾತ್‌ನಲ್ಲಿ ದಾಖಲಾರ್ಹ ಸಮಯ ಮಿತಿಯಲ್ಲಿ ಚೊಚ್ಚಲ ಜಲ ವಿಮಾನ ಯೋಜನೆಯ ಕಾಂಕ್ರಿಟ್ ಜಟ್ಟಿಗಳನ್ನು ಐಡಬ್ಲ್ಯುಎಐ ಸ್ಥಾಪಿಸಿತ್ತು. ಆದುದರಿಂದ ಹೈಡ್ರೋಗ್ರಾಫಿಕ್ ಸಮೀಕ್ಷೆ, ತೇಲುವ ಜಟ್ಟಿ ಹಾಗೂ ನಾವಿಕ ಸೂಚನೆಗಳ ಸ್ಥಾಪನೆಯನ್ನು ಐಡಬ್ಲ್ಯುಎಐಗೆ ವಹಿಸಿ ಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





