ಬೆಳಗಾವಿ ವಿವಾದ: ಕನ್ನಡ ರಾಜ್ಯೋತ್ಸವದ ದಿನ ತೋಳಿಗೆ ಕಪ್ಪು ರಿಬ್ಬನ್ ಕಟ್ಟಿ ಪ್ರತಿಭಟಿಸಿದ ಮಹಾರಾಷ್ಟ್ರ ಸಚಿವರು

ಮುಂಬೈ, ನ. 1: ಕರ್ನಾಟಕ ರಾಜ್ಯ ಉದಯದ ದಿನವಾದ ನವೆಂಬರ್ 1ನ್ನು ‘ಕಪ್ಪು ದಿನ’ವನ್ನಾಗಿ ಆಚರಿಸಿದ ಬೆಳಗಾವಿ ಮರಾಠಿ ಮಾತನಾಡುವ ಜನರಿಗೆ ಬೆಂಬಲ ವ್ಯಕ್ತಪಡಿಸಲು ಮಹಾರಾಷ್ಟ್ರ ಸಂಪುಟ ಸಚಿವರು ರವಿವಾರ ತೋಳಿಗೆ ಕಪ್ಪು ರಿಬ್ಬನ್ ಕಟ್ಟಿಕೊಂಡಿದ್ದರು.
ಬೆಳಗಾವಿ ಈ ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗ ಎಂದು ಮಹಾರಾಷ್ಟ್ರ ಪ್ರತಿಪಾದಿಸುತ್ತಿದೆ. ಆದರೆ, ಪ್ರಸ್ತುತ ಭಾಷೆ ಆಧಾರದಲ್ಲಿ ಬೆಳಗಾವಿ ಕರ್ನಾಟಕದಲ್ಲಿ ಇದೆ. ಬೆಳಗಾವಿ ಹಾಗೂ ಇತರ ಗಡಿ ಪ್ರದೇಶದ ಕುರಿತ ಎರಡು ರಾಜ್ಯಗಳ ನಡುವಿನ ವಿವಾದ ಹಲವು ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.
ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವ ಹಾಗೂ ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ರವಿವಾರ ತೋಳಿಗೆ ಕಪ್ಪು ರಿಬ್ಬನ್ ಕಟ್ಟಿಕೊಂಡು ಕಚೇರಿಗೆ ಹಾಜರಾದರು. ರಾಜ್ಯ ನಗರಾಭಿವೃದ್ಧಿ ಸಚಿವ ಹಾಗೂ ಶಿವಸೇನೆ ನಾಯಕ ಏಕನಾಥ್ ಶಿಂಧೆ ಥಾಣೆಯಲ್ಲಿ ಕಪ್ಪು ರಿಬ್ಬನ್ ಬಿಡುಗಡೆಗೊಳಿಸಿದರು.
ಗಡಿ ಪ್ರದೇಶದಲ್ಲಿ ಇರುವ ನಮ್ಮ ಸಹೋದರರಿಗೆ ಬೆಂಬಲ ವ್ಯಕ್ತಪಡಿಸಲು ರಾಜ್ಯ ಸರಕಾರದ ಎಲ್ಲ ಸಚಿವರು ಹಾಗೂ ಎನ್‌ಸಿಪಿ ಕಾರ್ಯಕರ್ತರು ತೋಳಿಗೆ ಕಪ್ಪು ರಿಬ್ಬನ್ ಕಟ್ಟಿಕೊಂಡಿದ್ದೇವೆ ಎಂದು ಪಾಟೀಲ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವ ಹೊರತಾಗಿಯೂ ಕರ್ನಾಟಕದಿಂದ ಮರಾಠಿ ಮಾತನಾಡುವ ಜನರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಬೆಳಗಾವಿ ಹಾಗೂ ಮರಾಠಿ ಮಾತನಾಡುವ ಜನರಿರುವ ಇತರ ಪ್ರದೇಶಗಳು ಮಹಾರಾಷ್ಟ್ರದ ಭಾಗವಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಏಕನಾಥ್ ಶಿಂಧೆ ಹಾಗೂ ಸಚಿವ ಛಗನ್ ಭುಜಬಲ್ ಕರ್ನಾಟಕದ ಮರಾಠಿ ಜನರಿಗೆ ಬರೆದೆ ಪತ್ರದಲ್ಲಿ, ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಹಾಗೂ ಮರಾಠಿ ಮಾತನಾಡುವ ಜನರಿರುವ ಇತರ ಪ್ರದೇಶಗಳ ಶಿಕ್ಷಣ, ಸಾಮಾಜಿಕ ನ್ಯಾಯ, ಮರಾಠಿ ಭಾಷೆಯ ಸಂರಕ್ಷಣೆ ಹಾಗೂ ಇತರ ವಿಷಯಗಳ ಬಗ್ಗೆ ಮಹಾರಾಷ್ಟ್ರ ಸರಕಾರ ಬದ್ಧವಾಗಿದೆ ಎಂದಿದ್ದಾರೆ.
ಗಡಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಪರಿಹರಿಸಲು ಮಹಾರಾಷ್ಟ್ರ ಸರಕಾರದ ಪ್ರಯತ್ನದ ಮೇಲ್ವಿಚಾರಣೆಗಾಗಿ ಈ ಇಬ್ಬರು ಸಚಿವರನ್ನು ಕಳೆದ ವರ್ಷ ಸಂಯೋಜಕರನ್ನಾಗಿ ನಿಯೋಜಿಸಲಾಗಿದೆ.







