ಖ್ಯಾತಿ ತಂದ ಯೂಟ್ಯೂಬರ್ ವಿರುದ್ಧವೇ ಬಾಬಾ ಕಾ ಢಾಬಾ ದಂಪತಿಯಿಂದ ಕೇಸ್ ದಾಖಲು
ಆತ ಮಾಡಿದ್ದೇನು?

ಹೊಸದಿಲ್ಲಿ : ದಕ್ಷಿಣ ದಿಲ್ಲಿಯಲ್ಲಿ ಬಾಬಾ ಕಾ ಢಾಬಾ ನಡೆಸುವ 80 ವರ್ಷದ ಕಾಂತಾ ಪ್ರಸಾದ್ ತಮ್ಮ ಢಾಬಾದ ವ್ಯಾಪಾರ ಕುಸಿದಿದೆ ಎಂದು ತಾನು ಕಣ್ಣೀರು ಹಾಕುತ್ತಿದ್ದ ವೀಡಿಯೊ ಪ್ರಸಾರ ಮಾಡಿ ತಮ್ಮ ಢಾಬಾವನ್ನು ಫೇಮಸ್ ಆಗುವಂತೆ ಮಾಡಿದ್ದ ಯು-ಟ್ಯೂಬರ್ ಗೌರವ್ ವಾಸನ್ ಅವರ ವಿರುದ್ಧವೇ ಪೊಲೀಸ್ ದೂರು ದಾಖಲಿಸಿದ್ದಾರೆ. ತಮಗೆ ಹಾಗೂ ತಮ್ಮ ಪತ್ನಿಗೆ ಸಹಾಯ ಮಾಡಲೆಂದು ದಾನಿಗಳು ನೀಡಿದ್ದ ಹಣವನ್ನು ವಾಸನ್ ದುರುಪಯೋಗಪಡಿಸಿದ್ದಾರೆ ಎಂದು ಕಾಂತಾ ಪ್ರಸಾದ್ ದೂರಿದ್ದಾರೆ.
ತಮಗೆ ವಾಸನ್ ಅವರಿಂದ ಕೇವಲ 2 ಲಕ್ಷ ರೂ.ದ ಚೆಕ್ ದೊರಕಿದೆ ಎಂದು ಪ್ರಸಾದ್ ತಮ್ಮ ದೂರಿನಲ್ಲಿ ಹೇಳಿದ್ದಾರ. ``ಈಗ ನನಗೆ ಹೆಚ್ಚು ಗ್ರಾಹಕರು ದೊರಕುತ್ತಿಲ್ಲ. ಹೆಚ್ಚಿನವರು ಸೆಲ್ಫೀ ತೆಗೆಯಲು ಬರುತ್ತಾರೆ. ಕೆಲ ದಿನಗಳ ಹಿಂದೆ ನನಗೆ ದಿನಕ್ಕೆ ರೂ 10,000 ವ್ಯಾಪಾರವಾಗುತ್ತಿದ್ದರೆ ಈಗ ವ್ಯಾಪಾರವು ರೂ 5,000ದಿಂದ ರೂ 3,000 ತನಕ ಕುಸಿದಿದೆ,'' ಎಂದಿದ್ದಾರೆ. ಸ್ಥಳೀಯ ಕೆಲ ಜನರೊಂದಿಗೆ ಸೇರಿಕೊಂಡು ಪ್ರಸಾದ್ ಶನಿವಾರ ಮಾಲವಿಯ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಹಾಗೂ ವಾಸನ್ ಉದ್ದೇಶಪೂರ್ವಕವಾಗಿ ಅವರ ಹಾಗೂ ಅವರ ಕುಟುಂಬದ ಬ್ಯಾಂಕ್ ಮಾಹಿತಿಯನ್ನು ಶೇರ್ ಮಾಡಿ ದೊಡ್ಡ ಮೊತ್ತವನ್ನು ದೇಣಿಗೆಯಾಗಿ ಸಂಗ್ರಹಿಸಿದ್ದಾರೆ,'' ಎಂದು ಆರೋಪಿಸಿದ್ದಾರೆ.
ಈ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ವಾಸನ್ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ ಹಾಗೂ ದೇಣಿಗೆಯಾಗಿ ದೊರೆತ ಎಲ್ಲಾ ಹಣವನ್ನು ಪ್ರಸಾದ್ ಖಾತೆಗೆ ವರ್ಗಾಯಿಸಿದ್ದಾಗಿ ತಿಳಿಸುತ್ತಾರೆ.
“ನಾನು ವೀಡಿಯೋ ತೆಗೆದಾಗ ಇಷ್ಟೊಂದು ದೊಡ್ಡ ಸುದ್ದಿಯಾಗುವುದು ಎಂದು ಅಂದುಕೊಂಡಿರಲಿಲ್ಲ. ಜನರು ಬಾಬಾ ಅವರಿಗೆ ಕಿರುಕುಳ ನೀಡುವುದು ಬೇಡವೆಂದು ನನ್ನ ಬ್ಯಾಂಕ್ ಮಾಹಿತಿ ನೀಡಿದ್ದೆ. ತಮಗೆ ಅಕ್ಟೋಬರ್ 27ರ ದಿನಾಂಕದ ರೂ 1 ಲಕ್ಷ ರೂ, 2.33 ಲಕ್ಷದ ಚೆಕ್ ಹಾಗೂ ರೂ 45,000 ಬ್ಯಾಂಕ್ ಪಾವತಿ ದೊರಕಿತ್ತು. ಮೂರು ದಿನಗಳ ಒಟ್ಟು ಸಂಗ್ರಹ ರೂ 3.5 ಲಕ್ಷ ಆಗಿತ್ತು,'' ಎಂದು ಅವರು ಹೇಳಿದ್ದಾರೆ. ಈ ಕುರಿತಾದ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನೂ ಅವರು ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕುರಿತು ಕಾಂತಾ ಪ್ರಸಾದ್ ಅವರನ್ನು ಕೇಳಿದಾಗ ತಾವು ತಮ್ಮ ಖಾತೆ ಪರಿಶೀಲಿಸಿಲ್ಲ, ತಾನು ಫೋನ್ ಒಯ್ಯುವುದಿಲ್ಲ ಎಂದಿದ್ದಾರೆ.
ವಾಸನ್ ಅವರಿಗೆ ರೂ 20 ಲಕ್ಷದಿಂದ ರೂ 25 ಲಕ್ಷ ದೊರಕಿದೆ ಎಂದು ಕೆಲ ಯುಟ್ಯೂಬರ್‍ಗಳು ಹೇಳುತ್ತಿದ್ದಾರೆ. ಆದರೆ ಇದನ್ನು ವಾಸನ್ ನಿರಾಕರಿಸಿದ್ದಾರಲ್ಲದೆ ಆರೋಪ ಹೊರಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.







