ಬಾಬ್ರಿ ಮಸೀದಿ ತೀರ್ಪು ನೀಡಿದ್ದ ನ್ಯಾಯಾಧೀಶರಿಗೆ ಭದ್ರತೆ ಮುಂದುವರಿಸಲು ಸುಪ್ರೀಂ ಕೋರ್ಟ್ ನಕಾರ

ಹೊಸದಿಲ್ಲಿ : ಅಯೋಧ್ಯೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಸೆಪ್ಟೆಂಬರ್ ತಿಂಗಳಲ್ಲಿ ನೀಡಿದ್ದ ವಿಶೇಷ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರಿಗೆ ಒದಗಿಸಲಾದ ಭದ್ರತೆ ಮುಂದುವರಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿನ ವಿಶೇಷ ನ್ಯಾಯಾಲಯ ತನ್ನ ಸೆಪ್ಟೆಂಬರ್ 30ರ ತೀರ್ಪಿನಲ್ಲಿ 28 ವರ್ಷ ಹಳೆಯ ಈ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್. ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ ಸಹಿತ ಎಲ್ಲಾ 32 ಮಂದಿ ಆರೋಪಿಗಳನ್ನೂ ದೋಷಮುಕ್ತಗೊಳಿಸಿತ್ತು.
ಈ ತೀರ್ಪು ಪ್ರಕಟಿಸಿದ್ದ ಸುರೇಂದ್ರ ಕುಮಾರ್ ಯಾದವ್ (60) ಅವರು 2019ರಲ್ಲಿಯೇ ನಿವೃತ್ತರಾಗಲಿದ್ದರೂ 2015ರಿಂದ ಯಾದವ್ ಅವರೇ ಬಾಬ್ರಿ ಮಸೀದಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದುದರಿಂದ ಅದರ ತೀರ್ಪು ನೀಡುವ ತನಕ ಅವರು ಸೇವೆಯಲ್ಲಿರುವಂತಾಗಲು ಅವರ ಸೇವಾವಧಿಯನ್ನು ವಿಸ್ತರಿಸಲಾಗಿತ್ತು.
ಸೆಪ್ಟೆಂಬರ್ 30ರಂದು ಸುಪ್ರೀಂ ಕೋರ್ಟಿಗೆ ಪತ್ರ ಬರೆದಿದ್ದ ಯಾದವ್ ಅವರು ಪ್ರಕರಣದ ಸೂಕ್ಷ್ಮತೆಯನ್ನು ಗಣನೆಗೆ ತೆಗೆದುಕೊಂಡು ತಮಗೆ ಒದಗಿಸಲಾದ ವೈಯಕ್ತಿಕ ಭದ್ರತೆ ಮುಂದುವರಿಸಬೇಕೆಂದು ಕೋರಿದ್ದರು. ಆದರೆ ಇಂದು ಸುಪ್ರೀಂ ಕೋರ್ಟ್ ಈ ಕುರಿತು ಪ್ರತಿಕ್ರಿಯಿಸಿ ``ಪತ್ರವನ್ನು ಪರಿಶೀಲಿಸದ್ದೇವೆ, ಭದ್ರತೆ ಮುಂದುವರಿಸುವ ಅಗತ್ಯವಿಲ್ಲವೆಂದು ತಿಳಿದಿದ್ದೇವೆ,'' ಎಂದಿದೆ.







