ವಿತ್ ಡ್ರಾವಲ್ ನಂತರ ಈಗ ಬ್ಯಾಂಕಿಗೆ ಹಣ ಠೇವಣಿ ಮಾಡಿದರೂ ಶುಲ್ಕ
ಬ್ಯಾಂಕ್ ಗ್ರಾಹಕರಿಗೆ ಕಹಿ ಸುದ್ದಿ

ಹೊಸದಿಲ್ಲಿ : ಕೆಲವು ಬ್ಯಾಂಕ್ ಗಳಲ್ಲಿನ ಗ್ರಾಹಕರು ಈಗ ಠೇವಣಿ ಹಾಗೂ ಹಣ ಹಿಂಪಡೆಯಲು ಶುಲ್ಕವನ್ನು ಪಾವತಿಸಲು ಸಿದ್ದರಾಗಬೇಕಾಗುತ್ತದೆ. ಒಂದು ನಿರ್ದಿಷ್ಟ ಮಿತಿಯ ನಂತರ ಬ್ಯಾಂಕುಗಳಲ್ಲಿ ತಿಂಗಳೊಂದಕ್ಕೆ ಠೇವಣಿ ಹಾಗೂ ವಿತ್ ಡ್ರಾ ಮಾಡುವ ಹಣಕ್ಕೆ ಕೆಲ ಬ್ಯಾಂಕುಗಳು ಶುಲ್ಕ ವಿಧಿಸಲು ಚಿಂತಿಸುತ್ತಿದೆ.
ನವೆಂಬರ್ ಒಂದರಿಂದಲೇ ಬ್ಯಾಂಕ್ ಆಫ್ ಬರೋಡಾ ಶುಲ್ಕ ವಿಧಿಸಲು ಆರಂಭಿಸಿದೆ. ಕೆಲ ಇತರ ಬ್ಯಾಂಕುಗಳಾದ ಬ್ಯಾಂಕ್ ಆಫ್ ಇಂಡಿಯಾ, ಪಿಎನ್‍ಬಿ, ಆ್ಯಕ್ಸಿಸ್ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್ ಗಳೂ ಶುಲ್ಕ ವಿಧಿಸುವ ಸಾಧ್ಯತೆ ಇದೆ. ಆದರೆ ಅವುಗಳು ಅಂತಿಮ ನಿರ್ಧಾರ ಇನ್ನಷ್ಟೇ ತೆಗೆದುಕೊಳ್ಳಬೇಕಿದೆ ಎಂದು ವರದಿಯಾಗಿದೆ.
ಠೇವಣಿ ಹಾಗೂ ಹಣ ಹಿಂಪಡೆಯಲು ಶುಲ್ಕ ವಿಧಿಸಲಾಗುತ್ತದೆ ಎಂಬ ಕೆಲ ವರದಿಗಳ ಆಧಾರದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ, ಈ ಹೊಸ ಕ್ರಮದಿಂದ ಕೇಂದ್ರ ಸರಕಾರ ಜನ ಸಾಮಾನ್ಯರ ಬೆನ್ನು ಮೂಳೆ ಮುರಿಯಲು ಹೊರಟಿದೆ. ಈಗ ಸ್ವಂತ ಹಣವನ್ನು ಠೇವಣಿ ಇಡಲು ಹಾಗೂ ವಿತ್ ಡ್ರಾ ಮಾಡಲೂ ಬ್ಯಾಂಕುಗಳು ಶುಲ್ಕ ವಿಧಿಸಲಿವೆ' ಎಂದು ಅವರು ಹೇಳಿದ್ದಾರೆ.
ಕೆಲ ವರದಿಗಳ ಪ್ರಕಾರ ತಿಂಗಳೊಂದಕ್ಕೆ ಮೂರು ಬಾರಿ ಹಣ ಹಿಂಪಡೆಯುವುದು ಉಚಿತವಾಗಿದ್ದರೆ ನಂತರ ಪ್ರತಿಯೊಂದು ಬಾರಿ ಹಣ ವಿತ್ ಡ್ರಾ ಮಾಡಿದಾಗಲೂ ರೂ 150 ಶುಲ್ಕ ಪಾವತಿಸಬೇಕಾಗಿದೆ. ಅಂತೆಯೇ ತಿಂಗಳೊಂದರಲ್ಲಿ ಮೂರು ಬಾರಿ ಠೇವಣಿ ಉಚಿತವಾಗಿದ್ದರೆ ನಂತರದ ಪ್ರತಿಯೊಂದು ಠೇವಣಿಗೂ ರೂ 40 ಶುಲ್ಕ ವಿಧಿಸಲಾಗುವುದು.







