ದೇವಸ್ಥಾನದ ಸಂಪರ್ಕ ರಸ್ತೆಗೆ ಜಮೀನು ಒದಗಿಸಿದ ಮಲಪ್ಪುರಂ ಮಸೀದಿ
ದಲಿತ ಕುಟುಂಬಗಳ ದಶಕಗಳ ಕನಸು ನನಸು

ತಿರುವನಂತಪುರ: ಕೇರಳದ ಮಲಪ್ಪುರಂ ಜಿಲ್ಲೆಯ ಮುತ್ತುವಳ್ಳೂರು ಪಂಚಾಯತ್ ಪ್ರದೇಶದ ಕೆಲ ದಲಿತ ಕುಟುಂಬಗಳಿಗೆ ಕಳೆದ ಕೆಲ ದಶಕಗಳಿಂದ ಒಂದು ಕನಸಿತ್ತು. ಅದೇನೆಂದರೆ ಗುಡ್ಡದ ಮೇಲಿರುವ ತಮ್ಮ ಕಾಲನಿ ಸಮೀಪದ ಪುಟ್ಟ ದೇವಾಲಯಕ್ಕೆ ಮುಖ್ಯ ರಸ್ತೆಯ ಮುಖಾಂತರ ಒಂದು ಸಂಪರ್ಕ ರಸ್ತೆ ಬೇಕೆಂಬುದು ಅವರ ಬಹು ಕಾಲದ ಬೇಡಿಕೆಯಾಗಿತ್ತು.
ಹಲವಾರು ವರ್ಷಗಳಿಂದ ಈ ಕುಟುಂಬಗಳು ತಮ್ಮ ಮನೆಗಳನ್ನು ತಲುಪಲು ಹಾಗೂ ಹತ್ತಿರದಲ್ಲಿಯೇ ಇರುವ ಕೊಝಿಕೋಡನ್ ಮುಚ್ಚಿತದಂ ಭಗವತಿ ದೇವಸ್ಥಾನ ತಲುಪಲು ಪುಟ್ಟದಾದ ಬೆಟ್ಟವೊಂದನ್ನು ಏರಬೇಕಿತ್ತು. ಅವರ ಮನೆಗಳಿಂದ ಆ ದೇವಳವನ್ನು ತಲುಪಲು ಇಕ್ಕಟ್ಟಾದ ಹಾದಿಯೊಂದು ಮಾತ್ರವಿತ್ತು. ಈ ದೇವಳ ಹಾಗೂ ಕಾಲನಿಯ ಸುತ್ತಲಿನ ಜಾಗ ಪರತ್ತಕುಡ್ ಜುಮಾ ಮಸೀದಿಗೆ ಸೇರಿತ್ತು.
ದೇವಸ್ಥಾನದ ಸಮಿತಿಯು ಮಸೀದಿಯ ಆಡಳಿತ ಸಮಿತಿಯನ್ನು ಭೇಟಿಯಾಗಿ ಸಂಪರ್ಕ ಹಾದಿಗಾಗಿ ಮನವಿ ಸಲ್ಲಿಸಿದ ಕೂಡಲೇ ಮುಖ್ಯ ರಸ್ತೆಯಿಂದ ಕಾಲನಿ ಹಾಗೂ ಅಲ್ಲಿಂದ ದೇವಸ್ಥಾನಕ್ಕೆ ಅಗಲವಾದ ಹಾದಿಯನ್ನು ಉಚಿತವಾಗಿ ನಿರ್ಮಿಸಲು ಹಾಗೂ ತನ್ನ ಜಮೀನಿನ ಒಂದು ಭಾಗವನ್ನು ನೀಡಲು ಮಸೀದಿ ಆಡಳಿತ ಮುಂದೆ ಬಂದಿದೆ.
``ಈ ಪ್ರದೇಶದಲ್ಲಿ ಎಲ್ಲಾ ಧರ್ಮದವರೂ ವಾಸಿಸುತ್ತಾರೆ ನಾವು ಎಲ್ಲರನ್ನೂ ಗೌರವಿಸುತ್ತೇವೆ,'' ಎಂದು ಮಸೀದಿ ಆಡಳಿತ ಸಮಿತಿಯ ಕಾರ್ಯದರ್ಶಿ ಶಿಹಾಬ್ ಹೇಳುತ್ತಾರೆ.
ಆರಂಭದಲ್ಲಿ ಜಮೀನನ್ನು ದೇವಳದ ಆಡಳಿತಕ್ಕೆ ನೀಡಲು ಮಸೀದಿ ನಿರ್ಧರಿಸಿದರೂ ಮುತ್ತುವಳ್ಳೂರು ಪಂಚಾಯತ್ ಅಧ್ಯಕ್ಷ ಅಹ್ಮದ್ ಸಗೀರ್ ಅವರು ಈ ವಾರ್ಡ್ ಸದಸ್ಯರೂ ಆಗಿರುವುದರಿಂದ ದೇವಸ್ಥಾನಕ್ಕೆ ಮೆಟ್ಟಲುಗಳನ್ನು ನಿರ್ಮಿಸಲು ಹಣ ಮಂಜೂರುಗೊಳಿಸುವ ಭರವಸೆ ನೀಡಿದ್ದರು. ಇದನ್ನು ಪರಿಗಣಿಸಿ ಜಮೀನನ್ನು ಪಂಚಾಯತ್‍ಗೆ ಹಸ್ತಾಂತರಿಸಲಾಯಿತು ನಂತರ ದೇವಸ್ಥಾನದ ತನಕ ಹಾಗೂ ಕಾಲನಿ ನಿವಾಸಿಗಳ ಮನೆಗಳ ತನಕ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.







