ಕೆಸಿ ರೋಡ್: ನಾಗರಿಕ ಹಿತರಕ್ಷಣಾ ವೇದಿಕೆಯ ಹಕ್ಕೊತ್ತಾಯ ಸಭೆ

ಮಂಗಳೂರು, ನ.2: ಕೆಸಿ ರೋಡ್‌ನಿಂದ ತಲಪಾಡಿವರೆಗೆ ಸರ್ವಿಸ್ ರಸ್ತೆ ನಿರ್ಮಿಸಬೇಕು ಮತ್ತು ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ಸುಸಜ್ಜಿತ ಬಸ್ ತಂಗುದಾಣವನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಸೋಮವಾರ ಹಕ್ಕೊತ್ತಾಯ ಸಭೆ ನಡೆಸಲಾಯಿತು. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸ ಲಾಯಿತು.
ಕೆಸಿ ರೋಡ್ ಜಂಕ್ಷನ್‌ನಲ್ಲಿ ಸೇರಿದ ಊರಿನ ಪ್ರಮುಖರು ಹಲವು ಬಾರಿ ಹೋರಾಟ ನಡೆಸಿದರೂ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ಸರ್ವಿಸ್ ರಸ್ತೆ ಇಲ್ಲದೆ ಇರುವ ಕಾರಣ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಎಚ್ಚೆತ್ತು ಸರ್ವಿಸ್ ರಸ್ತೆ ಮತ್ತು ಬಸ್ ತಂಗುದಾಣ ನಿರ್ಮಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ತಾಪಂ ಸದಸ್ಯ ಸಿದ್ದೀಕ್ ತಲಪಾಡಿ, ಡಿವೈಎಫ್‌ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಮೊಯ್ದಿನ್ ಬಾವ, ಸಾಮಾಜಿಕ ಕಾರ್ಯಕರ್ತ ಅಬ್ಬಾಸ್ ಉಚ್ಚಿಲ್, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ನಾರಾಯಣ ತಲಪಾಡಿ, ಕಾಂಗ್ರೆಸ್ ಮುಖಂಡ ಅಬ್ದುಲ್ ಸತ್ತಾರ್ (ಸದ್ದಾಮ್) , ಡಿಸಿಸಿ ಸದಸ್ಯ ಬಿ.ಎಸ್. ಇಸ್ಮಾಯಿಲ್, ಕಾರ್ಮಿಕ ಸಂಘಟನೆಗಳ ಮುಖಂಡ ರಾದ ಟಿ. ಇಸ್ಮಾಯಿಲ್, ಇಬ್ರಾಹಿಂ ಮದಕ, ತಲಪಾಡಿಯ ಬಿಲಾಲ್ ಮಸೀದಿಯ ಅಧ್ಯಕ್ಷ ಯಾಕೂಬ್, ಪಿಲಿಕೂರು ಮಸೀದಿಯ ಅಧ್ಯಕ್ಷ ಬಾವುಚ್ಚ, ಅಬ್ಬು ಹಾಜಿ ಕೆಸಿಆರ್, ಹಾರೂನ್ ಉಚ್ಚಿಲ್, ಫಾರೂಕ್ ಕೆಸಿ ರೋಡ್ ಉಪಸ್ಥಿತರಿದ್ದರು.









